ADVERTISEMENT

ಮಣಿಪುರ | ಮಹಿಳೆ ಹತ್ಯೆ ಖಂಡಿಸಿ ಚುರಚಾಂದ್‌ಪುರ್ ಬಂದ್‌: ಜನಜೀವನ ಅಸ್ತವ್ಯಸ್ತ

ಪಿಟಿಐ
Published 20 ಜೂನ್ 2025, 10:34 IST
Last Updated 20 ಜೂನ್ 2025, 10:34 IST
   

ಇಂಫಾಲ: ಮಣಿಪುರದ ಚುರಚಾಂದ್‌ಪುರ್ ಜಿಲ್ಲೆಯಲ್ಲಿ ಕುಕಿ ಸಮುದಾಯದ ಮಹಿಳೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿರುವ ಬುಡಕಟ್ಟು ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದಾರೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಾರುಕಟ್ಟೆಗಳು ಹಾಗೂ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಮಹಿಳೆಯರು ಸೇರಿದಂತೆ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ(ಐಟಿಎಲ್ಎಫ್) ಕಾರ್ಯಕರ್ತರು ಜಿಲ್ಲೆಯ ಹಲವು ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಗುರುವಾರ ಸಂಜೆ ಭದ್ರತಾ ಪಡೆಗಳು ಮತ್ತು ಶಸ್ತ್ರಸಜ್ಜಿತ ಗುಂಪಿನ ನಡುವಿನ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ (ಹೊಯ್ಖೋಲ್ಹಿಂಗ್ ಹಾವೊಕಿಪ್)‌ ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ಇವರ ಹತ್ಯೆಯನ್ನು ಖಂಡಿಸಿ ಐಟಿಎಲ್ಎಫ್ ಬಂದ್ ಘೋಷಿಸಿದೆ.

ADVERTISEMENT

ಏನಿದು ಘಟನೆ?

ಗುರುವಾರ ಬಿಷ್ಣುಪುರ ಜಿಲ್ಲೆಯ ಫುಬಲಾ ಗ್ರಾಮದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗುಂಪಿನ ಮೇಲೆ ಹತ್ತಿರದ ಗುಡ್ಡಗಾಡು ಪ್ರದೇಶಗಳಿಂದ ಗುಂಡಿನ ದಾಳಿ ನಡೆದಿತ್ತು. ಇದರಿಂದ ರೈತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಘಟನೆ ಬಳಿಕ ಲಾಂಗ್ಚಿಂಗ್‌ಮಾನ್ಬಿ ಮತ್ತು ಹೈಚಾಂಗ್ಲೋಕ್ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದರು.

ಕಾರ್ಯಾಚರಣೆ ವೇಳೆ ಶಸ್ತ್ರಸಜ್ಜಿತ ಗುಂಪು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಗುಂಡು ತಾಗಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಬುಡಕಟ್ಟು ಜನರು ಮತ್ತು ಅವರ ಭೂಮಿಯ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಐಟಿಎಲ್ಎಫ್ ಆಗ್ರಹಿಸಿದೆ.

ಏತನ್ಮಧ್ಯೆ, ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ 24 ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಲಾಗಿದೆ.

2023ರ ಮೇ ತಿಂಗಳಿನಿಂದ ಆರಂಭವಾದ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೇಂದ್ರವು ಫೆ. 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.