ADVERTISEMENT

ಕೇರಳ: ನೋರೊವೈರಸ್‌ ಪ್ರಕರಣ ಪತ್ತೆ, ಎಚ್ಚರಕ್ಕೆ ಸೂಚನೆ

ವಾಂತಿ, ಅತಿಸಾರಕ್ಕೆ ಕಾರಣವಾಗುವ ಸೋಂಕು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 21:30 IST
Last Updated 12 ನವೆಂಬರ್ 2021, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದ ವಯನಾಡ್‌ ಜಿಲ್ಲೆಯಲ್ಲಿ ನೋರೊವೈರಸ್‌ ಪ್ರಕರಣಗಳು ದೃಢಪಟ್ಟಿದ್ದು, ಸಾರ್ವಜನಿಕರು ಜಾಗರೂಕತೆಯಿಂದ ಇರುವಂತೆ ಕೇರಳ ಸರ್ಕಾರ ಶುಕ್ರವಾರ ಸೂಚಿಸಿದೆ.

ವಾಂತಿ ಹಾಗೂ ಅತಿಸಾರಕ್ಕೆ ಕಾರಣವಾಗುವ ಈ ಅಪರೂಪದ ಸೋಂಕು, ವಯನಾಡ್‌ ಜಿಲ್ಲೆಯ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ದೃಢಪಟ್ಟಿದೆ.

ಎರಡು ವಾರಗಳ ಹಿಂದೆಯೇ ಕಾಣಿಸಿಕೊಂಡ ಈ ಸೋಂಕು ಹರಡುವಿಕೆಯನ್ನು ಸದ್ಯಕ್ಕೆ ನಿಯಂತ್ರಿಸಲಾಗಿದೆ. ಈ ಅವಧಿಯಲ್ಲಿ ಬೇರೆ ಯಾರಿಗೂ ಸೋಂಕು ತಗುಲಿರುವ ಪ್ರಕರಣ ವರದಿಯಾಗಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಶುವೈದ್ಯಕೀಯ ಕಾಲೇಜಿನ ಅಧಿಕಾರಿಗಳ ಪ್ರಕಾರ, ಕಾಲೇಜು ಕ್ಯಾಂಪಸ್‌ ಹೊರಗಿನ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಈ ಸೋಂಕು ಮೊದಲು ಕಾಣಿಸಿಕೊಂಡಿತ್ತು. ಆರೋಗ್ಯಾಧಿಕಾರಿಗಳು, ಕ್ಷಿಪ್ರಗತಿಯಲ್ಲಿ ಮಾದರಿಯನ್ನು ಸಂಗ್ರಹಿಸಿ ಆಲಪುಳದಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು.

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಈ ಬಗ್ಗೆ ಆರೋಗ್ಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದು, ವಯನಾಡಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ನೋರೊವೈರಸ್‌ ಹರಡುವುದನ್ನು ತಡೆಯಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನುತ್ವರಿತವಾಗಿ ಕೈಗೊಳ್ಳುವಂತೆ ಸಚಿವೆ ಸೂಚಿಸಿದ್ದಾರೆ. ಸದ್ಯಕ್ಕೆ ಯಾವುದೇ ಅಪಾಯ ಇಲ್ಲವಾದರೂ ಪ್ರತಿಯೊಬ್ಬರು ಕೂಡ ಜಾಗರೂಕತೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಸೋಂಕು ಹಬ್ಬದಂತೆ ತಡೆಯುವ ದಿಸೆಯಲ್ಲಿ, ಕ್ಲೋರಿನೇಶನ್‌ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಮೂಲಗಳು ಶುದ್ಧವಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಕಾಯಿಲೆಯು ಶೀಘ್ರವೇ ಗುಣವಾಗುತ್ತದೆ. ಹೀಗಾಗಿ, ಈ ರೋಗದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಹಾಗೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.