ADVERTISEMENT

CJI ಅವಹೇಳನ: ಬಿಜೆಪಿ ಸಂಸದ ನಿಶಿಕಾಂತ ದುಬೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಪಿಟಿಐ
Published 8 ಮೇ 2025, 15:56 IST
Last Updated 8 ಮೇ 2025, 15:56 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಅದರ ಮುಖ್ಯ ನ್ಯಾಯಮೂರ್ತಿಯನ್ನು (ಸಿಜೆಐ) ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದ ಸಂಸದ, ಬಿಜೆಪಿಯ ಮುಖಂಡ ನಿಶಿಕಾಂತ ದುಬೆ ಅವರನ್ನು ಕೋರ್ಟ್‌ ಖಂಡಿಸಿದೆ. ಅವರು ಆಡಿದ ಮಾತುಗಳು ತನ್ನ ‘ಹೆಸರು ಕೆಡಿಸುವಂಥವು’ ಎಂದು ಕೂಡ ಕೋರ್ಟ್‌ ಕಟುವಾಗಿ ಹೇಳಿದೆ.

‘ನ್ಯಾಯಾಲಯಗಳು ಇಂತಹ ನಗೆಪಾಟಲಿನ ಮಾತುಗಳಿಂದಾಗಿ ಬಾಡಿಹೋಗುವುದಿಲ್ಲ, ನ್ಯಾಯಾಲಯಗಳು ಹೂವಿನಷ್ಟು ಮೃದುವೂ ಅಲ್ಲ’ ಎಂದು ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

ADVERTISEMENT

ವಕ್ಫ್‌ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದಕ್ಕಾಗಿ ದುಬೆ ಅವರು ಸುಪ್ರೀಂ ಕೋರ್ಟ್‌ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ‘ಸುಪ್ರೀಂ ಕೋರ್ಟ್‌ ದೇಶವನ್ನು ಅರಾಜಕ ಸ್ಥಿತಿಯತ್ತ ಒಯ್ಯುತ್ತಿದೆ’ ಎಂದು ಅವರು ಆರೋಪಿಸಿದ್ದರು. ‘ದೇಶದಲ್ಲಿನ ನಾಗರಿಕ ಸಮರಕ್ಕೆ ಸಿಜೆಐ ಸಂಜೀವ್ ಖನ್ನಾ ಅವರು ಹೊಣೆ’ ಎಂದು ಅವರು ದೂರಿದ್ದರು.

ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಕ್ರಮ ಜರುಗಿಸಬೇಕು ಎಂಬ ಮನವಿ ಇರುವ ಅರ್ಜಿಯ ವಿಚಾರಣೆಯನ್ನು ಮೇ 5ರಂದು ನಡೆಸಿದ ಪೀಠವು, ಅರ್ಜಿಯನ್ನು ವಜಾಗೊಳಿಸಿದೆಯಾದರೂ ದುಬೆ ಅವರನ್ನು ಉದ್ದೇಶಿಸಿ ಖಾರವಾದ ಮಾತುಗಳನ್ನು ಆಡಿದೆ. ಕೋರ್ಟ್‌ ತೀರ್ಪಿನ ಪ್ರತಿಯು ಗುರುವಾರ ಲಭ್ಯವಾಗಿದೆ.

ದುಬೆ ಆಡಿರುವ ಮಾತುಗಳು ಸುಪ್ರೀಂ ಕೋರ್ಟ್‌ನ ಹೆಸರು ಕೆಡಿಸುವಂತೆ ಇವೆ, ಕೋರ್ಟ್‌ನ ಅಧಿಕಾರವನ್ನು ಕುಗ್ಗಿಸುವಂತೆ ಇವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಮಾತುಗಳು ಬಹಳ ಬೇಜವಾಬ್ದಾರಿಯವು. ಸುಪ್ರೀಂ ಕೋರ್ಟ್‌ ಮತ್ತು ಈ ನ್ಯಾಯಾಲಯದ ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಎಲ್ಲರ ಗಮನ ಸೆಳೆಯುವ ಅಭಿಲಾಷೆ ಹೊಂದಿರುವುದನ್ನು ಅದು ತೋರಿಸುತ್ತದೆ ಎಂದು ಪೀಠವು ಹೇಳಿದೆ.

ಜನಪ್ರತಿನಿಧಿ ಆಡಿರುವ ಈ ಮಾತುಗಳು ಸಾಂವಿಧಾನಿಕ ನ್ಯಾಯಾಲಯಗಳ ಪಾತ್ರದ ಬಗ್ಗೆ ಅವರಿಗೆ ಅರಿವಿಲ್ಲದಿರುವುದನ್ನು ತೋರಿಸುತ್ತಿವೆ ಎಂದು ಅದು ಹೇಳಿದೆ.

‘ಸಾರ್ವಜನಿಕರು ನ್ಯಾಯಾಲಯಗಳ ಮೇಲೆ ಇರಿಸಿರುವ ವಿಶ್ವಾಸ ಮತ್ತು ನ್ಯಾಯಾಲಯಗಳ ವಿಶ್ವಾಸಾರ್ಹತೆಗೆ ಇಂತಹ ಅಸಂಬದ್ಧ ಮಾತುಗಳಿಂದಾಗಿ ಹಾನಿ ಆಗುತ್ತದೆ ಎಂಬುದಾಗಿ ನಾವು ಭಾವಿಸಿಲ್ಲ. ಆದರೆ ಆ ಮಾತುಗಳನ್ನು ಆಡಿದ್ದುದರ ಉದ್ದೇಶವು ಅದೇ ಆಗಿತ್ತು ಎಂಬುದರಲ್ಲಿ ಲವಲೇಶದ ಅನುಮಾನವೂ ಇಲ್ಲ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.