ನವದೆಹಲಿ: ‘ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅರ್ಹತೆ ಇದ್ದರೂ, ‘ಅರ್ಹರೆಂದು ಪರಿಗಣಿಸಲಾಗದು’ ಎಂಬುದಾಗಿ ಉದ್ದೇಶಪೂರ್ವಕವಾಗಿಯೇ ಘೋಷಿಸುವ ಮೂಲಕ ಅವರನ್ನು ಶಿಕ್ಷಣ ಮತ್ತು ನಾಯಕತ್ವದಿಂದ ದೂರ ಇಡಲಾಗುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಅರ್ಹರೆಂದು ಪರಿಗಣಿಸಲಾಗದು’ ಎಂಬುದು ಈಗ ನೂತನ ಮನುವಾದವಾಗಿದೆ’ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಮೇ 22ರಂದು ನಡೆಸಿದ ಸಂವಾದದಲ್ಲಿ ಅವರು ಈ ಮಾತು ಹೇಳಿದ್ದು, ಸಂವಾದದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗಿದೆ.
‘ಬಿಜೆಪಿ ಮತ್ತು ಆರ್‌ಎಸ್ಎಸ್ ಮೀಸಲಾತಿ ವಿರೋಧಿ ನಡೆ ಅನುಸರಿಸುತ್ತಿವೆ. ಸಂವಿಧಾನ ನೀಡಿರುವ ಶಕ್ತಿ ಬಳಸಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸೇರಿ, ಇಂತಹ ಪ್ರತಿ ನಡೆಗೆ ನಾವು ಉತ್ತರ ನೀಡುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿರುವುದು ವಿಡಿಯೊದಲ್ಲಿದೆ.
‘ಸಮಾನತೆ ಸಾಧಿಸಲು ಶಿಕ್ಷಣವೇ ದೊಡ್ಡ ಅಸ್ತ್ರ ಎಂಬುದಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಆರ್‌ಎಸ್‌ಎಸ್ ಈ ಶಕ್ತಿಯನ್ನೇ ದಮನ ಮಾಡುತ್ತಿವೆ’ ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು
ಮೀಸಲಾತಿ ಇರುವ ಹುದ್ದೆಗಳ ಪೈಕಿ ಶೇ 60ಕ್ಕೂ ಹೆಚ್ಚು ಪ್ರಾಧ್ಯಾಪಕ ಹುದ್ದೆಗಳು, ಶೇ 30ಕ್ಕೂ ಅಧಿಕ ಸಹ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ‘ಅರ್ಹರೆಂದು ಪರಿಗಣಿಸಲಾಗದು’ ಎಂಬ ವಿಧಾನವನ್ನು ಬಳಸಿ ಈ ಮೀಸಲು ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ
ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕೂಡ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ. ಇದು ಸಾಮಾಜಿಕ ನ್ಯಾಯಕ್ಕೆ ಮಾಡುವ ದ್ರೋಹ
ಮೀಸಲಾತಿ ಎಂಬುದು ನಮ್ಮ ಹಕ್ಕುಗಳಿಗಾಗಿ ಗೌರವ ಹಾಗೂ ಸಹಭಾಗಿತ್ವಕ್ಕೆ ನಡೆಸುವ ಹೋರಾಟ
ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳ ಇತಿಹಾಸವನ್ನು ಅಳಿಸಿಹಾಕುವುದೇ ‘ಹಿಂದುತ್ವ ಪ್ರಾಜೆಕ್ಟ್’ನ ಮೂಲಮಂತ್ರ
ದೇಶದಲ್ಲಿ ಶೇ 90ರಷ್ಟು ಇರುವವರ ಇತಿಹಾಸ ನಮ್ಮ ಪಠ್ಯಪುಸ್ತಕಗಳಲ್ಲಿ ಏಕಿಲ್ಲ? ಶೇ 10ರಷ್ಟು ಜನರ ಇತಿಹಾಸವನ್ನು ಮಾತ್ರ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ ಏಕೆ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಳ್ಳುಗಳ ರಾಯಭಾರಿ. ಆಮದು ಮಾಡಿಕೊಳ್ಳಲಾದ ಟೂಲ್‌ಕಿಟ್ ಬಳಸಿ ಸುಳ್ಳು ಪ್ರಸರಣ ಮಾಡುತ್ತಿದ್ದಾರೆಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.