ADVERTISEMENT

ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಭಾರತದ ಬಜೆಟ್ ಅನ್ನು ಎದುರು ನೋಡುತ್ತಿದೆ: ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2023, 4:06 IST
Last Updated 1 ಫೆಬ್ರುವರಿ 2023, 4:06 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ ಅನ್ನು ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಎದುರು ನೋಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ, 'ಇದು ಅತ್ಯಂತ ಮಹತ್ವದ ದಿನ ಮತ್ತು ಸಂದರ್ಭವಾಗಿದೆ. ರಾಷ್ಟ್ರಪತಿಯವರು ಮೊದಲ ಬಾರಿಗೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಮೊದಲ ಭಾಷಣವು ಸಂವಿಧಾನಕ್ಕೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ. ಇಡೀ ಜಗತ್ತು ಭಾರತದತ್ತ ಕಣ್ಣಿಟ್ಟಿದೆ' ಎಂದು ಹೇಳಿದ್ದಾರೆ.

'ಭಾರತ ಮೊದಲು, ನಾಗರಿಕರು ಮೊದಲು' ಎಂಬ ಚಿಂತನೆಯೊಂದಿಗೆ ಬಜೆಟ್‌ ಅಧಿವೇಶನವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ವಿರೋಧ ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂಬ ಭರವಸೆ ಇದೆ' ಎಂದು ತಿಳಿಸಿದ್ದಾರೆ.

ADVERTISEMENT

ದೇಶದ ಹಣಕಾಸು ಸಚಿವರೂ ಮಹಿಳೆ ಎಂಬುದನ್ನು ಉಲ್ಲೇಖಿಸಿರುವ ಮೋದಿ, 'ಅವರು (ನಿರ್ಮಲಾ ಸೀತಾರಾಮನ್‌) ನಾಳೆ ಮತ್ತೊಂದು ಬಜೆಟ್‌ ಮಂಡಿಸಲಿದ್ದಾರೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ದೇಶವಷ್ಟೇ ಅಲ್ಲದೆ ಇಡೀ ವಿಶ್ವವೇ ಭಾರತದ ಬಜೆಟ್‌ನತ್ತ ನೋಡುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಜನಪ್ರಿಯ ಬಜೆಟ್ ಮಂಡನೆಯ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.