ADVERTISEMENT

ಆನ್‌ಲೈನ್‌ ಶಿಕ್ಷಣ: ಬಡ ಮಕ್ಕಳಿಗೆ ಅಗತ್ಯ ಉಪಕರಣ ಒದಗಿಸಲು ಸೂಚನೆ

ಪಿಟಿಐ
Published 18 ಸೆಪ್ಟೆಂಬರ್ 2020, 12:10 IST
Last Updated 18 ಸೆಪ್ಟೆಂಬರ್ 2020, 12:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಅನುಕೂಲವಾಗುವಂತೆ ಖಾಸಗಿ ಮತ್ತು ಕೇಂದ್ರೀಯ ವಿದ್ಯಾಲಯದಂತಹ ಸರ್ಕಾರಿ ಶಾಲೆಗಳು ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಸೇವೆಯನ್ನು ಒದಗಿಸಬೇಕು ಎಂದು ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಈ ರೀತಿಯ ಸೌಲಭ್ಯ ಕಲ್ಪಿಸದೇ ಇರುವುದರಿಂದ ಮಕ್ಕಳ ನಡುವೆ ತಾರತಮ್ಯ ಮತ್ತು ‘ಡಿಜಿಟಲ್ ಭೇದಭಾವ’ ಸೃಷ್ಟಿಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಸಂಜೀವ್ ನರುಲಾ ಅವರಿದ್ದನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳು ಇತರರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಕೀಳರಿಮೆ ಒಳಗಾಗಬಹುದು. ಇದರಿಂದ ಅವರ ಮನಸಿಗೆ ಘಾಸಿ ಉಂಟಾಗುವ ಸಾಧ್ಯತೆಯಿದೆ ಎಂದು ಕೋರ್ಟ್‌ ತಿಳಿಸಿದೆ.

ADVERTISEMENT

ಅಶಕ್ತರು, ಆರ್ಥಿಕವಾಗಿ ಹಿಂದುಳಿದವರಿಗೆ ಆನ್‌ಲೈನ್‌ ತರಗತಿ ಪ್ರವೇಶ ಸಾಧ್ಯವಾಗುತ್ತಿದೆಯೇ ಎಂಬುದನ್ನು ಶಾಲೆಗಳು ಖಚಿತಪಡಿಸಿಕೊಳ್ಳಬೇಕು. ಅಗತ್ಯ ಉಪಕರಣ ನೀಡದೇ ಇರುವುದರಿಂದ ಮಕ್ಕಳ ನಡುವೆ ಆರ್ಥಿಕ ತಡೆಗೋಡೆ ನಿರ್ಮಾಣವಾಗುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೂ ತೊಡಕು ಉಂಟಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಆನ್‌ಲೈನ್‌ ಶಿಕ್ಷಣದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಮಕ್ಕಳಿಗೆ ತರಗತಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತಹ ಉಪಕರಣ ಒದಗಿಸಬೇಕು ಎಂದು ಜಸ್ಟೀ‌ಸ್‌ ಫಾರ್ ಆಲ್‌ ಎಂಬ ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.