ADVERTISEMENT

ಮುಂಬೈ ಹುತಾತ್ಮ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ ಎಂದಿದ್ದ ಸಾದ್ವಿಗೆ ನೋಟಿಸ್‌ 

ಏಜೆನ್ಸೀಸ್
Published 9 ಮೇ 2019, 16:56 IST
Last Updated 9 ಮೇ 2019, 16:56 IST
ಸಾದ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌
ಸಾದ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌    

ಮುಂಬೈ: ಮುಂಬೈನ 26/11ರ ಭಯೋತ್ಪಾದಕ ದಾಳಿಯ ವೇಳೆ ಹುತಾತ್ಮರಾಗಿದ್ದ ವೀರ ಪೊಲೀಸ್‌ ಅಧಿಕಾರಿಹೇಮಂತ್ ಕರ್ಕರೆ ಬಗ್ಗೆಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬೋಪಾಲ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಸಾದ್ವಿ ಪ್ರಜ್ಞಾ ಸಿಂಗ್‌ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗವು ಶನಿವಾರ ನೋಟಿಸ್‌ ಜಾರಿ ಮಾಡಿದ್ದು, ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದೆ.

ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವಪ್ರಜ್ಞಾ ಸಿಂಗ್‌, ಗುರುವಾರ ಪಕ್ಷದ ಕಾರ್ಯಕ್ರಮವೊಂದರ ಭಾಷಣದಲ್ಲಿ ಮಾತನಾಡುತ್ತಾ, ‘ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಅವರು ಸತ್ತಿದ್ದು ನನ್ನ ಶಾಪದಿಂದ,’ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಚುನಾವಣಾ ಆಯೋಗ ಗ್ರಹಿಸಿಕೊಂಡಿದೆ. ವಿವರಣೆ ನೀಡುವಂತೆ ಪ್ರಜ್ಞಾ ಸಿಂಗ್‌ ಅವರಿಗೆಬೋಪಾಲ್‌ ಜಿಲ್ಲಾ ಚುನಾವಣಾ ಅಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

2008ರ ನವೆಂಬರ್‌ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ ಹುತಾತ್ಮರಾಗಿದ್ದರು.

ಭೋಪಾಲ್‍‌ದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಪ್ರಜ್ಞಾ, ಮಾಲೇಗಾಂವ್ ಪ್ರಕರಣದಲ್ಲಿ ಬಂಧಿಯಾಗಿದ್ದ ತನಗೆ ಜೈಲಿನಲ್ಲಿ ಅಧಿಕಾರಿಗಳುಯಾವ ರೀತಿ ಕಿರುಕುಳಕೊಟ್ಟಿದ್ದರು ಎಂದು ಹೇಳಿ ಕಣ್ಣೀರಿಟ್ಟಿದ್ದರು.

ಇದಾದ ನಂತರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ಪ್ರಗ್ಯಾ ವಾಗ್ದಾಳಿ ನಡೆಸಿದ್ದಾರೆ.ಕರ್ಕರೆ ತನಗೆ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದರು. ಅವರು ಪದೇ ಪದೇ ನನ್ನನ್ನು ವಿಚಾರಣೆಗೊಳಪಡಿಸಿ ತೊಂದರೆ ನೀಡುತ್ತಿದ್ದರು.ನಾನು ನಿರಪರಾಧಿಯಾದ ಕಾರಣ ಅವರ ಪ್ರಶ್ನೆಗಳಿಗೆ ನನ್ನ ಬಳಿಉತ್ತರವಿರುತ್ತಿರಲಿಲ್ಲ.

ಜೈಲಿನಲ್ಲಿರುವಾಗ ಕರ್ಕರೆ ತನಗೆ ನೀಡಿದ ಕಿರುಕುಳ, ಬೆದರಿಕೆಗೆ ನಾನು ಅವರನ್ನು ಶಪಿಸಿದೆ. ನೀನು ಸರ್ವ ನಾಶ ಆಗುತ್ತೀಯಾ ಎಂದು ನಾನು ಶಪಿಸಿದ್ದೆ. ನಾನು ಜೈಲಿಗೆ ಕಾಲಿಟ್ಟ ಅದೇ ದಿನ ಉಗ್ರರಿಂದ ಕರ್ಕರೆ ಹತರಾದರು.

ನನ್ನನ್ನು ಬಂಧಿಸಿದ ದಿನವೇ ಹೇಮಂತ್ ಕರ್ಕರೆಯ ಅಶುಭ ದಿನಗಳು ಆರಂಭವಾಗಿದ್ದವು. ಸರಿಯಾಗಿ 45 ದಿನಗಳ ನಂತರ ಅವರು ಸತ್ತರು. ಅಲ್ಲಿಗೆ ಆ ಅಶುಭ ದಿನಗಳ ಮುಗಿದವು ಎಂದು ಪ್ರಗ್ಯಾ ಹೇಳಿದ್ದಾರೆ.

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.