ಪಟ್ನಾ: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ’ಯ (ಪಿಎಂ–ಕಿಸಾನ್) ಅಡಿ ನೀಡುವ ₹22 ಸಾವಿರ ಕೋಟಿಯ 19ನೆಯ ಕಂತಿನ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಿದರು. ಇದರಿಂದಾಗಿ ದೇಶದಾದ್ಯಂತ ಒಟ್ಟು 9.8 ಕೋಟಿ ರೈತರಿಗೆ ಪ್ರಯೋಜನ ಆಗಲಿದೆ. ಬಿಹಾರದಲ್ಲಿ ಈ ಯೋಜನೆಯ ಫಲಾನುಭವಿ ರೈತರ ಸಂಖ್ಯೆ 82 ಲಕ್ಷ.
ಸೋಮವಾರ ಭಾಗಲ್ಪುರ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮೋದಿ ಅವರು ಭಾಗಿಯಾದರು. ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಈ ಸಮಾವೇಶದಲ್ಲಿ ಮೋದಿ ಅವರು ನೇರ ನಗದು ವರ್ಗಾವಣೆ ಮೂಲಕ, ರೈಲು ಮತ್ತು ರಸ್ತೆ ಯೋಜನೆಗಳ ಘೋಷಣೆಯ ಮೂಲಕ ಹಾಗೂ ಭಾಗಲ್ಪುರದ ಕಹಲಗಾಂವ್‌ನಲ್ಲಿ ವಿಕ್ರಮಶಿಲಾ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವ ಮಾಡುವ ಮೂಲಕ ಹಲವು ಕೊಡುಗೆಗಳನ್ನು ನೀಡಿದರು.
‘ನಾವು ರೈತರಿಗೆ ಅತಿಹೆಚ್ಚಿನ ಮಹತ್ವ ನೀಡಿದ್ದೇವೆ. ಆಹಾರ ಸಂಸ್ಕರಣೆ ಉದ್ಯಮಕ್ಕೂ ನಾವು ಗಮನ ನೀಡುತ್ತಿದ್ದೇವೆ. ಈ ಉದ್ಯಮದಿಂದಾಗಿ ರೈತರಿಗೂ ಪ್ರಯೋಜನವಾಗುತ್ತದೆ’ ಎಂದು ಮೋದಿ ಅವರು ಹೇಳಿದರು. ಪಿಎಂ–ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ ₹6,000 ನೀಡಲಾಗುತ್ತದೆ. ಈ ಮೊತ್ತವನ್ನು ರೈತರ ಖಾತೆಗೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ.
ಅಕ್ಟೋಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಈ ಮೊತ್ತವನ್ನು ವರ್ಗಾವಣೆ ಮಾಡಿರುವುದು ಮಹತ್ವದ್ದಾಗಿದೆ.
ಭಾಗಲ್ಪುರ ರೇಷ್ಮೆಯನ್ನು ಬಳಸಿ ತಯಾರಿಸಿದ ಸೀರೆಗಳು ದೇಶದಲ್ಲಿ ಮಾತ್ರವೇ ಅಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಪ್ರಸಿದ್ಧಿ ಪಡೆದಿವೆ ಎಂದು ಮೋದಿ ಹೇಳಿದರು.
2005ರ ನಂತರ ಬಿಹಾರವು ಅಭವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುವಂತೆ ತಾವು ಮಾಡಿದ್ದು ಹೇಗೆ ಎಂಬುದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿವರಿಸಿದರು. ‘2005ರಲ್ಲಿ ನಾನು ಅಧಿಕಾರ ಹಿಡಿದಾಗ ಬಿಹಾರದ ವಾರ್ಷಿಕ ಬಜೆಟ್ ಗಾತ್ರ ₹28 ಸಾವಿರ ಕೋಟಿ ಆಗಿತ್ತು. ಈಗ ಅದು ₹3 ಲಕ್ಷ ಕೋಟಿಗಿಂತ ಹೆಚ್ಚಾಗಿದೆ’ ಎಂದು ನಿತೀಶ್ ಹೇಳಿದರು. ಅನುದಾನಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.
ತೇಜಸ್ವಿ ಟೀಕೆ:
ಮೋದಿ ಅವರ ಬಿಹಾರ ಭೇಟಿಯ ಪ್ರಯೋಜನ ಏನು ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
‘ಮೋದಿ ಅವರು 11 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ, ನಿತೀಶ್ ಅವರು 20 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬಿಹಾರವು ತಲಾವಾರು ಆದಾಯದಲ್ಲಿ, ಹೂಡಿಕೆಯಲ್ಲಿ, ರೈತರ ಆದಾಯದಲ್ಲಿ ಕೆಳಮಟ್ಟದಲ್ಲಿದೆ’ ಎಂದು ತೇಜಸ್ವಿ ಅವರು ಹೇಳಿದ್ದಾರೆ.
ಚುನಾವಣೆ ಹತ್ತಿರವಾದಾಗಲೆಲ್ಲ ಪ್ರಧಾನಿಯವರು ಬಿಹಾರಕ್ಕೆ ಬರುತ್ತಾರೆ, ಭರವಸೆಗಳನ್ನು ನೀಡುತ್ತಾರೆ. ಆದರೆ ಅವು ಯಾವುದನ್ನೂ ಅವರು ಈಡೇರಿಸುವುದಿಲ್ಲ ಎಂದು ತೇಜಸ್ವಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.