ADVERTISEMENT

ಕುಸ್ತಿಪಟುಗಳಲ್ಲಿ ಆಡಿಯೋ–ವಿಡಿಯೊ ಸಾಕ್ಷಿ ಕೇಳಿದ ಪೊಲೀಸರು; ಕಪಿಲ್‌ ಸಿಬಲ್ ಕಿಡಿ

ಪಿಟಿಐ
Published 11 ಜೂನ್ 2023, 10:12 IST
Last Updated 11 ಜೂನ್ 2023, 10:12 IST
ಕಪಿಲ್‌ ಸಿಬಲ್‌
ಕಪಿಲ್‌ ಸಿಬಲ್‌    

ನವದೆಹಲಿ: ‘ಇನ್ನು ಮುಂದೆ ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿರಬೇಕು ಅಥವಾ ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳುವುದಕ್ಕೆಂದೆ ಒಬ್ಬರನ್ನು ನೇಮಿಸಿಕೊಂಡಿರಬೇಕು‘ ಎಂದು ರಾಜ್ಯಸಭಾ ಸಂಸದ ಕಪಿಲ್‌ ಸಿಬಲ್ ದೆಹಲಿ ಪೊಲೀಸ್‌ ನಡೆ ವಿರುದ್ಧ ಕಿಡಿಕಾರಿದ್ದಾರೆ.

ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಎಸಗಿದ ಆರೋಪ ಮಾಡಿದ್ದರು. ಈ ವಿಷಯವಾಗಿ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು, ಇಬ್ಬರು ಮಹಿಳಾ ಕುಸ್ತಿಪಟುಗಳ ಬಳಿ ಪೋಟೋ, ಆಡಿಯೋ ಅಥವಾ ವಿಡಿಯೋ ಸಾಕ್ಷಿ ಒದಗಿಸುವಂತೆ ಕೇಳಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಈ ನಡೆಗೆ ಕಪಿಲ್ ಸಿಬಲ್‌ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಪಿಲ್ ಸಿಬಲ್, ‘ಬ್ರಿಜ್ ಭೂಷಣ್‌ ವಿರುದ್ಧ ತನಿಖೆ: ವಿಡಿಯೊ, ಆಡಿಯೊ, ಕರೆ ರೆಕಾರ್ಡಿಂಗ್‌, ವಾಟ್ಸ್‌ಆ್ಯಪ್‌ ಸಂದೇಶ ಯಾವುದಾದರೂ ಸಾಕ್ಷಿ ಒದಗಿಸುವಂತೆ ಸಂತ್ರಸ್ತೆಯರ ಬಳಿ ಕೇಳಿದ ದೆಹಲಿ ಪೊಲೀಸರು. ಇದೀಗ ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡಿರಬೇಕು ಮತ್ತು ವಿಡಿಯೊ ರೆಕಾರ್ಡ್‌ ಮಾಡಲು ಯಾರನ್ನಾದರೂ ನೇಮಕ ಮಾಡಿಕೊಳ್ಳಬೇಕು. ಸಂತ್ರಸ್ತರಿಯರಿಗೆ ಸೂಚನೆ ಬಂದ ನಂತರವೇ ಅವರ ಮೇಲೆ ದೌರ್ಜನ್ಯ ನಡೆಯುತ್ತದೆ!‘ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ADVERTISEMENT

ಬ್ರಿಜ್‌ಭೂಷಣ್‌ ವಿರುದ್ಧ ಇದೇ ಜೂನ್ 15ರೊಳಗೆ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ಕೇಂದ್ರ ಸರ್ಕಾರ ಕುಸ್ತಿಪಟುಗಳಿಗೆ ಭರವಸೆ ನೀಡಿದ್ದು, ಸರ್ಕಾರದ ಆಶ್ವಾಸನೆ ಮೇರೆಗೆ ಕುಸ್ತಿಪಟುಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಪ್ರತಿಭಟನಾನಿರತ ಕುಸ್ತಿಪಟುಗಳ ಪರ ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್ ಸಿಬಲ್‌ ವಾದ ಮಂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.