ADVERTISEMENT

‘ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಸೆಪ್ಟೆಂಬರ್‌ನಿಂದ ಆನ್‌ಲೈನ್‌ ಪರೀಕ್ಷೆ’

ಪಿಟಿಐ
Published 3 ಫೆಬ್ರುವರಿ 2021, 18:19 IST
Last Updated 3 ಫೆಬ್ರುವರಿ 2021, 18:19 IST

ನವದೆಹಲಿ: ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೆಪ್ಟೆಂಬರ್‌ನಿಂದ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು (ಎನ್‌ಆರ್‌ಎ) ಆನ್‌ಲೈನ್‌ ಪರೀಕ್ಷೆಯನ್ನು ಆರಂಭಿಸಲಿದೆ.

‘ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು (ಸಿಇಟಿ) ಎನ್‌ಆರ್‌ಎ ನಡೆಸಲಿದೆ. ಎನ್‌ಆರ್‌ಎ ಕೇವಲ ಅಭ್ಯರ್ಥಿಗಳ ಪ್ರಾಥಮಿಕ ಹಂತದ ಪರೀಕ್ಷೆಯನ್ನು ಕೈಗೊಳ್ಳಲಿದೆ. ಅಂತಿಮ ನೇಮಕಾತಿಯನ್ನು ನಿರ್ದಿಷ್ಟ ಪರೀಕ್ಷೆಗಳ ಮೂಲಕ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮತ್ತು ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆಗಳ (ಐಬಿಪಿಎಸ್‌) ಮೂಲಕ ಆಯಾ ಇಲಾಖೆಗಳು ಕೈಗೊಳ್ಳಲಿವೆ’ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

‘ಸಿಇಟಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯಾ ನೇಮಕಾತಿ ಸಂಸ್ಥೆಗಳು ನಡೆಸುವ ಪರೀಕ್ಷೆಗೆ ಹಾಜರಾಗಬಹುದು’ ಎಂದು ಲೋಕಸಭೆಯಲ್ಲಿ ಬುಧವಾರ ಲಿಖಿತ ಉತ್ತರ ನೀಡಿದ್ದಾರೆ.

ADVERTISEMENT

‘ಪ್ರಶ್ನೆ ಪತ್ರಿಕೆಗಳನ್ನು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಲು ತಜ್ಞರನ್ನು ಗುರುತಿಸಲಾಗುವುದು. ಇದರಿಂದ, ಅಭ್ಯರ್ಥಿಗಳು ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲೇ ತೆಗೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.

‘ರಾಜ್ಯ ಸರ್ಕಾರಗಳು ಸಹ ನೇಮಕಾತಿಗೆ ಅಭ್ಯರ್ಥಿಗಳು ಸಿಇಟಿಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.