ADVERTISEMENT

ರಾಮ ಮಂದಿರ ಟ್ರಸ್ಟ್‌ನಲ್ಲಿ ಕಡೆಗಣನೆ: ಮಹಾಂತ ನೃತ್ಯ ಗೋಪಾಲ್ ದಾಸ್ ಬೇಸರ

ಪಿಟಿಐ
Published 7 ಫೆಬ್ರುವರಿ 2020, 6:58 IST
Last Updated 7 ಫೆಬ್ರುವರಿ 2020, 6:58 IST
ಮಹಾಂತ ನೃತ್ಯ ಗೋಪಾಲ್ ದಾಸ್
ಮಹಾಂತ ನೃತ್ಯ ಗೋಪಾಲ್ ದಾಸ್   

ಅಯೋಧ್ಯ:‘ರಾಮ ಮಂದಿರ ನಿರ್ಮಾಣ ಟ್ರಸ್ಟ್‌ಗೆ ತನ್ನನ್ನು ಸೇರಿಸಿಕೊಂಡಿಲ್ಲ’ ಎಂದು ರಾಮಜನ್ಮ ಭೂಮಿ ನ್ಯಾಸ್ (ಆರ್‌ಜೆಎನ್‌) ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹೈಕಮಾಂಡ್‌ ಗುರುವಾರ ಲಖನೌನ ಪ್ರಮುಖ ಮುಖಂಡರಾದ ಶಾಸಕ ವೇದ್‌ ಪ್ರಕಾಶ್‌ ಗುಪ್ತಾ, ಮೇಯರ್‌ ರಿಷಿಕೇಶ್ ಉಪಾಧ್ಯಾಯ ಮತ್ತು ಅಯೋಧ್ಯೆ ಮಹಾನಗರ ಅಧ್ಯಕ್ಷೆ ಅಭಿಷೇಕ್‌ ಮಿಶ್ರ ಅವರನ್ನು ಇಲ್ಲಿನ ಮಣಿ ರಾಮ್ ದಾಸ್ ದೇವಸ್ಥಾನಕ್ಕೆ ತುರ್ತಾಗಿ ತೆರಳಲು ಸೂಚಿಸಿದ್ದರು.

ಬಂದ ಅಧಿಕಾರಿಗಳನ್ನು ದೇವಸ್ಥಾನದ ಒಳಗೆ ಬರುವುದಕ್ಕೆ ತಡೆಯೊಡ್ಡಿದ ಮಹಾಂತ್, ವಾಪಾಸ್‌ ಹೋಗುವಂತೆ ಒತ್ತಾಯಿಸಿದರು. ನಂತರ ಸ್ವಾಮೀಜಿಗಳ ತುರ್ತು ಸಭೆ ಮತ್ತು ಸುದ್ದಿಗೋಷ್ಠಿಗೆ ಕರೆ ನೀಡಿದ್ದರು ಎಂದು ಅಭಿಷೇಕ್‌ ಮಿಶ್ರ ತಿಳಿಸಿದರು.

ADVERTISEMENT

ಗೃಹ ಸಚಿವಾಲಯದಿಂದ ಫೋನ್‌ ಕರೆ ಬಂದ ನಂತರ, ಎರಡೂ ಸಭೆಗಳನ್ನು ರದ್ದುಪಡಿಸಲಾಯಿತು ಎಂದು ನೃತ್ಯ ಗೋಪಾಲ್‌ ದಾಸ್‌ ಅವರ ಉತ್ತರಾಧಿಕಾರಿ ಕಮಲ್‌ ನಯನ್‌ ದಾಸ್‌ ತಿಳಿಸಿದರು.

‘ಮಹಾಂತ್‌, ಅಮಿತ್‌ ಶಾ ರೊಂದಿಗೆ ಮಾತುಕತೆ ನಡೆಸಲಿ ಎಂದು ಫೋನ್‌ ಮುಖಾಂತರ ಸಂಭಾಷಣೆಗೆ ಅವಕಾಶ ಕಲ್ಪಿಸಿದೆವು. ಟ್ರಸ್ಟ್‌ನಲ್ಲಿ ಇನ್ನೂ ಮೂರು ಸ್ಥಾನಗಳು ಖಾಲಿ ಉಳಿದಿದ್ದು, ಮಹಾಂತ್‌ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದು ಶಾಸಕ ಗುಪ್ತಾ ಹೇಳಿದರು.

‘ರಾಮ ಮಂದಿರ ಹೋರಾಟದಲ್ಲಿ ತಮ್ಮ ಜೀವನವನ್ನೇ ಸವೆಸಿದ್ದವರನ್ನುಈಗ ಕಡೆಗಣಿಸಲಾಗುತ್ತಿದೆ’ ಎಂದು ಮಹಾಂತ್‌ ಬೇಸರ ಹೊರಹಾಕಿದ್ದರು. ‘ಟ್ರಸ್ಟ್‌ ರಚನೆಯ ವಿಷಯದಲ್ಲಿ ವೈಷ್ಣವ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ’ ಎಂದು ಕಮಲ್‌ ನಯನ್‌ ದಾಸ್‌ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.