ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಹರಿಯಾಣದ ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾ ಬಿಡುಗಡೆ

10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಜಿ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:57 IST
Last Updated 2 ಜುಲೈ 2021, 14:57 IST
ತಿಹಾರ್‌ ಜೈಲಿನಿಂದ ಶುಕ್ರವಾರ ಬಿಡುಗಡೆಯಾದ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರನ್ನು ಗುರುಗ್ರಾಮ್‌ನ ಸಿರ್ಹಾಲ್ ಟೋಲ್ ಪ್ಲಾಜಾ ಬಳಿಯ ದೆಹಲಿ- ಗುರುಗ್ರಾಮ್ ಗಡಿಯಲ್ಲಿ ಶುಕ್ರವಾರದಂದು ರಾಷ್ಟ್ರೀಯ ಲೋಕ ದಳದ ಬೆಂಬಲಿಗರು ಸ್ವಾಗತಿಸಿದರು – ಪಿಟಿಐ ಚಿತ್ರ
ತಿಹಾರ್‌ ಜೈಲಿನಿಂದ ಶುಕ್ರವಾರ ಬಿಡುಗಡೆಯಾದ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರನ್ನು ಗುರುಗ್ರಾಮ್‌ನ ಸಿರ್ಹಾಲ್ ಟೋಲ್ ಪ್ಲಾಜಾ ಬಳಿಯ ದೆಹಲಿ- ಗುರುಗ್ರಾಮ್ ಗಡಿಯಲ್ಲಿ ಶುಕ್ರವಾರದಂದು ರಾಷ್ಟ್ರೀಯ ಲೋಕ ದಳದ ಬೆಂಬಲಿಗರು ಸ್ವಾಗತಿಸಿದರು – ಪಿಟಿಐ ಚಿತ್ರ   

ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ಅವರು ಶುಕ್ರವಾರ ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಭಾರತೀಯ ರಾಷ್ಟ್ರೀಯ ಲೋಕ ದಳದ (ಐಎನ್‌ಎಲ್‌ಡಿ) ಮುಖ್ಯಸ್ಥರಾದ, 86 ವರ್ಷದ ಚೌಟಾಲಾ ಅವರನ್ನು ಬಂದಿಖಾನೆಯ ಔಪಚಾರಿಕ ನಿಯಮಗಳನ್ನು ಪೂರೈಸಿದ ನಂತರ ಅಧಿಕಾರಿಗಳುಜೈಲಿನಿಂದ ಬಿಡುಗಡೆ ಮಾಡಿದ್ದಾರೆ.

ಚೌಟಾಲಾ ಅವರು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಪರಾಧಿಯಾಗಿ 2013ರಲ್ಲಿ ಜೈಲು ಸೇರಿದ್ದರು. ಈಗಾಗಲೇ 9 ವರ್ಷ 9 ತಿಂಗಳು ಜೈಲುವಾಸ ಪೂರ್ಣಗೊಳಿಸಿದ್ದಾರೆ. 2020ರ ಮಾರ್ಚ್‌ನಿಂದ ತುರ್ತು ಪೆರೋಲ್ ಮೇಲೆ ಚೌಟಾಲಾ ಹೊರಗಿದ್ದರು. ಇದೇ ವರ್ಷದ ಫೆಬ್ರುವರಿ 21ರಂದು ಅವರು ಶರಣಾಗಬೇಕಿತ್ತು. ಅವರ ಪೆರೋಲ್ ಅವಧಿಯನ್ನು ಹೈಕೋರ್ಟ್ ವಿಸ್ತರಿಸಿತ್ತು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಒಂಬತ್ತೂವರೆ ವರ್ಷ ಜೈಲು ವಾಸ ಪೂರೈಸಿದ ಕೈದಿಗಳಿಗೆ ಆರು ತಿಂಗಳ ಶಿಕ್ಷೆ ಅವಧಿಯ ವಿನಾಯಿತಿ ನೀಡುವಂತೆ ಕಳೆದ ವರ್ಷ ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು, ಅದರಂತೆ ಬಿಡುಗಡೆ ಮಾಡಿದ್ದೇವೆ’ ಎಂದು ಬಂದಿಖಾನೆ ಐಜಿಪಿ ಸಂದೀಪ್ ಗೋಯಲ್ ತಿಳಿಸಿದ್ದಾರೆ.

2000ರಲ್ಲಿ 3,206 ಮಂದಿ ಕಿರಿಯ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ ಪ್ರಕರಣದಲ್ಲಿ ಓಂಪ್ರಕಾಶ್‌ ಚೌಟಾಲಾ, ಅವರ ಪುತ್ರ ಅಜಯ್ ಚೌಟಾಲಾ ಮತ್ತು ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಸೇರಿ 53 ಮಂದಿ ಅಪರಾಧಿಗಳಾಗಿದ್ದು, ಇವರೆಲ್ಲರಿಗೂ ಸಿಬಿಐ ವಿಶೇಷ ನ್ಯಾಯಾಲಯವು 2013ರ ಜನವರಿಯಲ್ಲಿ ಜೈಲು ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.