ADVERTISEMENT

‘ಒಬಿಸಿ’ ಸಮುದಾಯದ 1 ಕೋಟಿ ಮನೆಗಳ ಭೇಟಿಗೆ ಬಿಜೆಪಿ ಯೋಜನೆ 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯಿಂದ ಅವಮಾನ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 17:04 IST
Last Updated 27 ಮಾರ್ಚ್ 2023, 17:04 IST
ಬಿಜೆಪಿ
ಬಿಜೆಪಿ   

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯು ಈ ವಿಚಾರವನ್ನು ಜನರ ಬಳಿ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದು, ಇದಕ್ಕಾಗಿ ದೇಶದಾದ್ಯಂತ ಒಬಿಸಿ ಸಮುದಾಯದ 1 ಕೋಟಿ ಮನೆಗಳನ್ನು ತಲುಪಲು ಯೋಜನೆ ರೂಪಿಸುತ್ತಿದೆ.

ಈ ವಿಚಾರವಾಗಿ ಪಕ್ಷದಲ್ಲಿರುವ ಒಬಿಸಿ ಸಮುದಾಯದ ಎಲ್ಲಾ ಸಂಸದರೊಂದಿಗೆ ಚರ್ಚಿಸುವುದಕ್ಕಾಗಿ ಇದೇ 29ರಂದು ಸಭೆ ಕರೆಯಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರು ಈ ಯೋಜನೆಯ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಿದ್ದಾರೆ.

2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಪಕ್ಷದ ಒಬಿಸಿ ಮೋರ್ಚಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಬಿಂಬಿಸುವ ಸಲುವಾಗಿ ಒಂಬತ್ತು ದಿನಗಳ ಕಾರ್ಯಕ್ರಮವೊಂದನ್ನು ನಡೆಸಲು ಈಗಾಗಲೇ ನಿರ್ಧರಿಸಿದೆ. ಆದರೆ ಈಗ ರಾಹುಲ್‌ ಅವರು ಒಬಿಸಿ ಸಮುದಾಯವನ್ನು ಅವಮಾನಿಸಿರುವ ವಿಚಾರವನ್ನೇ ಕಾರ್ಯಕ್ರಮದ ಮೂಲ ಧ್ಯೇಯವನ್ನಾಗಿಸಿಕೊಳ್ಳಲು ತೀರ್ಮಾನಿಸಿದೆ.

ADVERTISEMENT

ಬಿಜೆಪಿ ಸಂಸ್ಥಾಪನಾ ದಿನವಾದ ಏಪ್ರಿಲ್‌ 6ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಂದು (ಏ.14) ಸಮಾರೋಪ ಸಮಾರಂಭ ನಿಗದಿಯಾಗಿದೆ. ಈ ಅವಧಿಯಲ್ಲಿ ದೇಶದ 1 ಲಕ್ಷ ಗ್ರಾಮಗಳಲ್ಲಿರುವ ಒಬಿಸಿ ಸಮುದಾಯದ 1 ಕೋಟಿ ಮನೆಗಳಿಗೆ ಭೇಟಿ ನೀಡಲು ತೀರ್ಮಾನಿಸಲಾಗಿದೆ.

‘ಚುನಾವಣಾ ಪ್ರಚಾರ ರ‍್ಯಾಲಿಯ ವೇಳೆ ರಾಹುಲ್‌ ಅವರು ‘ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ. ಆ ಮೂಲಕ ಇಡೀ ಒಬಿಸಿ ಸಮುದಾಯವನ್ನು ನಿಂದಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಒಬಿಸಿ ಸಮುದಾಯಕ್ಕೆ ಎಸಗಿರುವ ದ್ರೋಹ ಎಂತಹುದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶ’ ಎಂದು ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ.ಲಕ್ಷ್ಮಣ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.