ADVERTISEMENT

ವ್ಯಂಗ್ಯಚಿತ್ರ ಪ್ರಕರಣ: ವಾಕ್‌ ಸ್ವಾತಂತ್ರ್ಯದ ‘ದುರುಪಯೋಗ’ ಎಂದ ಸುಪ್ರೀಂ ಕೋರ್ಟ್‌

ಪಿಟಿಐ
Published 14 ಜುಲೈ 2025, 13:57 IST
Last Updated 14 ಜುಲೈ 2025, 13:57 IST
   

ನವದೆಹಲಿ: ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ‘ದುರುಪಯೋಗ’ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪ ಎದುರಿಸುತ್ತಿರುವ ವ್ಯಂಗ್ಯಚಿತ್ರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಹೀಗೆ ಅಭಿಪ್ರಾಯಪಟ್ಟಿದೆ.

‘ನೀವು ಇದನ್ನೆಲ್ಲಾ ಏಕೆ ಮಾಡುತ್ತೀರಿ’ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ ಕುಮಾರ್‌ ಅವರನ್ನೊಳಗೊಂಡ ಪೀಠವು ವ್ಯಂಗ್ಯಚಿತ್ರಕಾರ ಹೇಮಂತ್‌ ಮಾಳವೀಯ ಪರ ಹಾಜರಿದ್ದ ವಕೀಲರಾದ ವೃಂದಾ ಗ್ರೋವರ್‌ ಅವರನ್ನು ಕೇಳಿತು.

ADVERTISEMENT

‘ಈ ಅರ್ಜಿಯು 2021ರಲ್ಲಿ ಕೋವಿಡ್‌ ಸಮಯದಲ್ಲಿ ಮಾಡಿದ್ದ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದ್ದಾಗಿದೆ. ಅದು (ವ್ಯಂಗ್ಯಚಿತ್ರ) ಕೆಟ್ಟ ಅಭಿರುಚಿ ಹೊಂದಿದೆ ಎಂದು ನಾನು ಹೇಳುತ್ತೇನೆ. ಆದರೆ ಅದು ಅಪರಾಧವೇ? ನಾನು ಇಲ್ಲಿ ಯಾವುದನ್ನೂ ಸಮರ್ಥಿಸಲು ಪ್ರಯತ್ನಿಸುತ್ತಿಲ್ಲ’ ಎಂದು ಗ್ರೋವರ್‌ ಹೇಳಿದರು. ಮಾಳವೀಯ ಮಾಡಿದ್ದ ಪೋಸ್ಟ್‌ಅನ್ನು ತೆಗೆದು ಹಾಕಲು ಅವರು ಒಪ್ಪಿಕೊಂಡರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಏನೇ ತೀರ್ಪು ನೀಡಿದರೂ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದು ಖಚಿತ’ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು. 

ಮಧ್ಯಪ್ರದೇಶದ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ ಎಂಬುದನ್ನು ಪೀಠದ ಗಮನಕ್ಕೆ ತಂದರು. ಪೀಠವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ನಿರೀಕ್ಷಣಾ ಜಾಮೀನು ನಿರಾಕರಿಸಿ ಮಧ್ಯಪ್ರದೇಶ ಹೈಕೋರ್ಟ್ ಜುಲೈ 3ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಾಳವೀಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ವಕೀಲ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತ ವಿನಯ್ ಜೋಶಿ ಸಲ್ಲಿಸಿದ ದೂರಿನ ಮೇರೆಗೆ ಮೇ ತಿಂಗಳಲ್ಲಿ ಇಂದೋರ್‌ನ ಲಸೂಡಿಯಾ ಪೊಲೀಸ್ ಠಾಣೆಯಲ್ಲಿ ಮಾಳವೀಯ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.