ADVERTISEMENT

ಒಡಿಶಾದಲ್ಲಿ ಭಾರಿ ಮಳೆ | ಮಹಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಪ್ರವಾಹ ಭೀತಿ

ಪಿಟಿಐ
Published 16 ಆಗಸ್ಟ್ 2022, 10:53 IST
Last Updated 16 ಆಗಸ್ಟ್ 2022, 10:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭುವನೇಶ್ವರ: ‘ಕಳೆದ ಕೆಲವು ದಿನಗಳಿಂದ ಒಡಿಶಾದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ, ಮಹಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಇಲ್ಲಿನ ಹಲವು ಜಿಲ್ಲೆಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನದ ಭಾಗವಾಗಿ, ಒಡಿಶಾ ಸರ್ಕಾರವು ಹಿರಾಕುಡ್ ಜಲಾಶಯದ ಇನ್ನೂ ಎಂಟು ಗೇಟ್‌ಗಳನ್ನು ಮುಚ್ಚಿದೆ. ಆದರೆಛತ್ತೀಸ್‌ಗಡದ ಮೇಲ್ಮಟ್ಟದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಿರಾಕುಡ್ ಜಲಾಶಯಕ್ಕೆ ಹೆಚ್ಚಿನ ನೀರು ಸೇರುತ್ತಿದೆ. ಮಹಾನದಿಯ ಎಲ್ಲಾ ಉಪನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ’ ಎಂದುವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿ.ಕೆ ಜೇನಾ ಹೇಳಿದರು.

‘ಮಹಾನದಿಗೆ 1.5 ಲಕ್ಷ ಕ್ಯುಸೆಕ್‌ಗೆ ಬದಲಾಗಿ ಟೆಲ್ ನದಿಯಿಂದ ಮೂರು ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಬಿಟ್ಟಿರುವುದರಿಂದ ಪರಿಸ್ಥಿತಿ ಹದಗೆಟ್ಟಿದೆ.ಪ್ರವಾಹವನ್ನು ನಿಯಂತ್ರಿಸಲು ಹಿರಾಕುಡ್ ಅಣೆಕಟ್ಟಿನ ಎಂಟು ಗೇಟ್‌ಗಳನ್ನು ಮುಚ್ಚಬೇಕಾಗಿದೆ. ಭಾನುವಾರ 34 ಗೇಟ್‌ಗಳ ಬದಲಿಗೆ 26 ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

‘ಸೋಮವಾರ ಸಂಜೆ 6 ಗಂಟೆಗೆ ಅಣೆಕಟ್ಟಿನಿಂದ10.41 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಟಕ್ ಬಳಿ ಪ್ರವಾಹ ಸಂಭವಿಸಬಹುದಾದ ನೀರಿನ ಪ್ರಮಾಣವನ್ನು 10.5 ಲಕ್ಷ ಕ್ಯುಸೆಕ್‌ನೊಳಗೆ ಇರಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದ್ದರಿಂದ ಎಂಟು ಗೇಟ್‌ಗಳನ್ನು ಮುಚ್ಚುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ’ ಎಂದು ಜೇನಾ ಹೇಳಿದರು.

ಪ್ರವಾಹ ಭೀತಿಯನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‌ಗಳು ಜಾಗರೂಕರಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಕಟಕ್, ಜಗತ್‌ಸಿಂಗ್‌ಪುರ್, ಕೇಂದ್ರಪಾರ ಮತ್ತು ಪುರಿ ಜಿಲ್ಲೆಗಳ ಅಧಿಕಾರಿಗಳಿಗೆ ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರಬೇಕೆಂದು ವಿಶೇಷ ಸೂಚನೆಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.