ಸಾಂದರ್ಭಿಕ ಚಿತ್ರ
- ಎ.ಐ ಚಿತ್ರ
ಭುವನೇಶ್ವರ: ಒಡಿಶಾದ ಢೆಂಕನಾಲ್ ಜಿಲ್ಲೆಯ ಕಲ್ಲಿನ ಕ್ವಾರಿಯೊಂದರಲ್ಲಿ ಬಂಡೆಯ ದೊಡ್ಡ ಭಾಗವೊಂದು ಕುಸಿದು ಹಲವು ಮಂದಿ ಸಾವಿಗೀಡಾಗಿರುವ ಸಂಶಯವಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮೊತಂಗ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಈ ಕ್ವಾರಿ ಇದ್ದು, ಶನಿವಾರ ಸಂಜೆ ಕೆಲವು ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಕಲ್ಲಿನಡಿಯಲ್ಲಿ ಎಷ್ಟು ಕಾರ್ಮಿಕರು ಸಿಲುಕಿದ್ದಾರೆ, ಘಟನೆಗೆ ಕಾರಣ ಏನು ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ. ಅಗ್ನಿ ಶಾಮಕ ತಂಡ, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ, ಶ್ವಾನ ದಳ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಗ್ನಿ ಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಢೆಂಕನಾಲ್ ಜಿಲ್ಲಾಧಿಕಾರಿ ಆಶೀಶ್ ಈಶ್ವರ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಭಿನವ್ ಸೋಂಕರ್ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
‘ಢೆಂಕನಾಲ್ ನ ಕ್ವಾರಿಯೊಂದರಲ್ಲಿ ಬಂಡೆ ಕುಸಿದು ಹಲವು ಮಂದಿ ಸಾವಿಗೀಡಾಗಿರುವ ವಿಷಯ ಕೇಳಿ ನೋವಾಯಿತು. ಈ ದುಃಖದ ಸಮಯದಲ್ಲಿ, ಅಗಲಿದವರ ಆತ್ಮಗಳಿಗೆ ಶಾಶ್ವತ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ’ ಎಂದು ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ‘ಎಕ್ಸ್’ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.