ಸಾಮೂಹಿಕ ಅತ್ಯಾಚಾರ
ಕೋಲ್ಕತ್ತ: ಎರಡನೇ ವರ್ಷದ ವೈದ್ಯ ವಿದ್ಯಾರ್ಥಿನಿ ಮೇಲೆ ಕೆಲವು ವ್ಯಕ್ತಿಗಳು, ಶುಕ್ರವಾರ ರಾತ್ರಿ ವೇಳೆ ಅರಣ್ಯ ಪ್ರದೇಶಕ್ಕೆ ಹೊತ್ತುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
‘ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ’ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.
ಪಶ್ಚಿಮ ಬರ್ದ್‌ಮಾನ್ ಜಿಲ್ಲೆಯ ದುರ್ಗಾಪುರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಒಂದರಲ್ಲಿ ಸಂತ್ರಸ್ತೆ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಒಡಿಶಾದ ಜಲೇಶ್ವರ ಪ್ರದೇಶದವರು. ‘ಊಟ ಮಾಡಲು ರಾತ್ರಿ 8ರಿಂದ 8.30ರ ಸುಮಾರಿಗೆ ಮಗಳು ತನ್ನ ಸ್ನೇಹಿತನ ಜೊತೆ ತೆರಳಿದ್ದರು’ ಎಂದು ಸಂತ್ರಸ್ತೆ ಕುಟುಂಬಸ್ಥರು ಹೇಳಿದ್ದಾರೆ.
‘ಕಾಲೇಜು ಕ್ಯಾಂಪಸ್ ಬಳಿಯ ಅರಣ್ಯ ಪ್ರದೇಶದಲ್ಲಿಯೇ ಘಟನೆ ನಡೆದಿದೆ. ರಾತ್ರಿ ಊಟಕ್ಕೆ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ತೆರಳುತ್ತಿದ್ದರು. ಈ ವೇಳೆ ಮೂವರು ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದಿದ್ದಾರೆ. ಇವರು ಬರುತ್ತಿದ್ದಂತೆಯೇ ಸ್ನೇಹಿತ ಓಡಿಹೋಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಬಳಿಕ, ಘಟನೆ ಕುರಿತು ಯಾರಿಗೂ ಹೇಳದಂತೆ ವ್ಯಕ್ತಿಗಳು ಸಂತ್ರಸ್ತೆಯನ್ನು ಬೆದರಿಸಿದ್ದಾರೆ. ಆಕೆಯ ಬಳಿ ಇದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಮೊಬೈಲ್ ನೀಡಬೇಕು ಎಂದರೆ, ಹಣ ನೀಡಬೇಕು ಎಂದೂ ಬೇಡಿಕೆ ಇಟ್ಟಿದ್ದರು’ ಎಂದರು.
ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ, ಘಟನೆ ಕುರಿತು ಆಕೆಯಿಂದ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ವಿದ್ಯಾರ್ಥಿನಿಯ ಪೋಷಕರು ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದರು. ರಾಷ್ಟ್ರೀಯ ಮಹಿಳಾ ಆಯೋಗದ ತಂಡವೊಂದು ಶೀಘ್ರವೇ ಸಂಸತ್ರಸ್ತೆ ಮತ್ತು ಆಕೆಯ ಪೋಷಕರನ್ನು ಭೇಟಿ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.