ADVERTISEMENT

ಒಡಿಶಾ: ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿಯ ಅಮರೇಶ್ ಜೆನಾ ಬಂಧನ; ಪಕ್ಷದಿಂದ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 11:09 IST
Last Updated 27 ಜುಲೈ 2025, 11:09 IST
   

ಭುವನೇಶ್ವರ: ಇಲ್ಲಿನ ಮಹಾನಗರ ಪಾಲಿಕೆಯ (ಬಿಎಂಸಿ) ಬಿಜೆಡಿ ಸದಸ್ಯ ಅಮರೇಶ್ ಜೆನಾ ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬಾಲೇಶ್ವರದಲ್ಲಿ ಬಂಧಿಸಲಾಗಿದೆ.

ಬಾಲೇಶ್ವರದ ನೀಲಗಿರಿ ಪ್ರದೇಶದ ಬಹರಾಂಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ಭವನೇಶ್ವರಕ್ಕೆ ಕರೆತರಲಾಗುತ್ತಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಅಮರೇಶ್ ಜೆನಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 64(ಅತ್ಯಾಚಾರ), 89 (ಅನುಮತಿಯಿಲ್ಲದೇ ಗರ್ಭಪಾತ) ಹಾಗೂ ಪೊಕ್ಸೊ ಕಾಯ್ದೆ ಅಡಿಯಲ್ಲಿ ಇಲ್ಲಿನ ಲಕ್ಷ್ಮೀಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ನಡುವೆ ತಕ್ಷಣದಿಂದಲೇ ಅಮರೇಶ್ ಜೆನಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಮರೇಶ್ ಜೆನಾ ಅವರ ಅಮಾನತು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಅವರ ಬಂಧನದಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು ಎಂದು ಬಿಜೆಡಿ ನಾಯಕ ಅಶೋಕ್ ಪಾಂಡಾ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಮಹಿಳಾ ಹಿತಾಸಕ್ತಿಯ ನಿಲುವಿಗೆ ಬಿಜೆಡಿ ಬದ್ಧವಾಗಿದ್ದು ಆರೋಪಿ ಅಮರೇಶ್ ಜೆನಾ ಕಾನೂನು ಪ್ರಕ್ರಿಯೆಗೆ ಒಳಗಾಗುತ್ತಾರೆ ಎಂದು ಪಾಂಡಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.