ಭುವನೇಶ್ವರ: ಇಂಗ್ಲಿಷ್ ಪ್ರಾಧ್ಯಾಪಕ ಸಮೀರ ಕುಮಾರ್ ಸಾಹು ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಬಾಲೇಶ್ವರದ ಫಾಕಿರ್ ಮೋಹನ್ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ನ್ಯಾಯ ಸಿಗದೆ ಕಾಲೇಜು ಆವರಣದಲ್ಲಿಯೇ ಅವರು ಬೆಂಕಿ ಹಚ್ಚಿಕೊಂಡು ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು.
ದೇಶದಾದ್ಯಂತ ವಿದ್ಯಾರ್ಥಿನಿಯ ಸಾವಿಗೆ ಆಕ್ರೋಶ ವ್ಯಕ್ತವಾಗಿದೆ. ಶೇಕಡ 95ರಷ್ಟು ಸುಟ್ಟ ಗಾಯಗಳಾಗಿದ್ದ ವಿದ್ಯಾರ್ಥಿನಿಯು ಮೂರು ದಿನ ಸಾವು–ಬದುಕಿನ ನಡುವೆ ಹೋರಾಡಿದ್ದರು. ಇಲ್ಲಿನ ಏಮ್ಸ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಆಸ್ಪತ್ರೆಯಿಂದ ಹೊರ ತರಲಾಗುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಬಿಜೆಡಿ ಸದಸ್ಯರು ಪ್ರತಿಭಟನೆ ನಡೆಸಿದರು.
ಎರಡು ದಿನಗಳ ಒಡಿಶಾ ಭೇಟಿಯಲ್ಲಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಸಂಜೆ ಏಮ್ಸ್‌ಗೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ್ದರು. ಮಂಗಳವಾರ ಬಾಲೇಶ್ವರದಲ್ಲಿರುವ ವಿದ್ಯಾರ್ಥಿನಿಯ ಹುಟ್ಟೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಸಾವಿರಾರು ಜನ ಅಲ್ಲಿ ಸೇರಿದ್ದರು. ‘ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು’ ಎಂದು ಇದೇ ವೇಳೆ ಗ್ರಾಮಸ್ಥರು ಆಗ್ರಹಿಸಿದರು.
ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಾಂಶುಪಾಲ ದಿಲೀಪ್ ಕುಮಾರ್ ಘೋಶ್ ಹಾಗೂ ಪ್ರಾಧ್ಯಾಪಕ ಸಾಹು ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆಕೆ ನನ್ನನ್ನು ಭೇಟಿಯಾಗಿದ್ದಳು. ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದೆ. ಕಾಲೇಜಿನ ಪ್ರಾಂಶುಪಾಲ ಸರಿಯಾಗಿ ಕೆಲಸ ಮಾಡಿಲ್ಲಪ್ರತಾಪ್ ಸಾರಂಗಿ ಬಾಲೇಶ್ವರ ಸಂಸದ
ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಕಠಿಣ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ ಎಂದು ವಿದ್ಯಾರ್ಥಿನಿಯ ಕುಟುಂಬಕ್ಕೆ ನಾನು ಭರವಸೆ ನೀಡುತ್ತೇನೆಮೋಹನ್ ಚರಣ್ ಮಾಝಿ ಒಡಿಶಾ ಮುಖ್ಯಮಂತ್ರಿ
‘ಲೈಂಗಿಕ ಬೇಡಿಕೆ ಈಡೇರಿಸುವಂತೆ ಒತ್ತಡ’:
ಫಾಕಿರ್ ಮೋಹನ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯು ಎರಡನೇ ವರ್ಷದ ಬಿ.ಇಡಿ ಪದವಿ ವ್ಯಾಸಂಗ ಮಾಡುತ್ತಿದ್ದರು. ‘ತನ್ನ ಲೈಂಗಿಕ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿನ್ನ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುವುದಾಗಿ ನನ್ನ ಮಗಳಿಗೆ ಆ ಪ್ರಾಧ್ಯಾಪಕ ಬೆದರಿಕೆ ಹಾಕಿದ್ದ. ನನ್ನ ಮಗಳು ಆತನ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ’ ಎಂದು ವಿದ್ಯಾರ್ಥಿನಿಯ ತಂದೆ ಹೇಳಿದರು. ‘ಹಿಂಸೆ ತಾಳಲಾರದೆ ಆಕೆ ಕಾಲೇಜಿನ ಆಂತರಿಕ ದೂರು ಸಮಿತಿಗೆ ಜೂನ್ 30ರಂದು ದೂರು ನೀಡಿದಳು. ಆದರೆ ಈ ಸಮಿತಿಯವರು ಸರಿಯಾಗಿ ತನಿಖೆ ಮಾಡಲಿಲ್ಲ. ಆ ಪ್ರಾಧ್ಯಾಪಕನನ್ನು ರಕ್ಷಣೆ ಮಾಡಿದರು. ನನ್ನ ಮಗಳ ದೂರಿಗೆ ಸಂಬಂಧಿಸಿ ಯಾವುದೇ ಸಾಕ್ಷ್ಯ ಇಲ್ಲ ಎಂದರು. ಇದು ನನ್ನ ಮಗಳನ್ನು ಕುಗ್ಗಿಸಿತ್ತು’ ಎಂದರು. ‘ತನ್ನ ದೂರಿನ ಕುರಿತ ಬೆಳವಣಿಗೆಯನ್ನು ವಿಚಾರಿಸಲು ಜುಲೈ 12ರಂದು (ಶನಿವಾರ) ಪ್ರಾಂಶುಪಾಲರನ್ನು ಭೇಟಿಯಾಗಲು ಆಕೆ ತೆರಳಿದ್ದಳು. ಅಲ್ಲಿ ಪ್ರಾಂಶುಪಾಲರು ನನ್ನ ಮಗಳಿಗೆ ಬೆದರಿಕೆ ಹಾಕಿದ್ದಾರೆ. ನೀನು ನೀಡಿದ ದೂರಿಗೆ ಸಂಬಂಧಿಸಿ ಸಾಕ್ಷ್ಯಗಳಿಲ್ಲ. ಸುಳ್ಳು ದೂರು ನೀಡಿದ್ದಕ್ಕಾಗಿ ನಿನ್ನ ಮೇಲೆಯೇ ಕ್ರಮ ಕೈಗೊಳ್ಳಬಹುದು ಎಂದು ಗದರಿದ್ದರು’ ಎಂದು ಆರೋಪಿಸಿದರು. ‘ಪ್ರಾಂಶುಪಾಲರ ಕೊಠಡಿಯಿಂದ ಹೊರಬರುತ್ತಿದ್ದಂತೆಯೇ ನನ್ನ ಮಗಳು ಬೆಂಕಿ ಹಚ್ಚಿಕೊಂಡಿದ್ದಾಳೆ. ಆಂತರಿಕ ದೂರು ಸಮಿತಿಯವರೇ ನನ್ನ ಮಗಳ ಸಾವಿಗೆ ಕಾರಣ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು. ‘ಸಮಿತಿಗೆ ದೂರು ನೀಡಿದ ಬಳಿಕ ಆಕೆ ತೀವ್ರ ಮಾನಸಿಕ ಒತ್ತಡದಲ್ಲಿ ಇದ್ದಳು. ಪ್ರಾಧ್ಯಾಪಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆಯೂ ತೀವ್ರ ಅಸಮಾಧಾನದಿಂದ ಇದ್ದಳು’ ಎಂದು ವಿದ್ಯಾರ್ಥಿನಿಯ ಸ್ನೇಹಿತರು ಹೇಳಿದರು. ನ್ಯಾಯಕ್ಕಾಗಿ ಸುಮಾರು ಒಂದು ವಾರಗಳ ಕಾಲ ವಿದ್ಯಾರ್ಥಿನಿಯು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
* ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ನಾಲ್ವರು ಸದಸ್ಯರ ಸತ್ಯಶೋಧನಾ ಸಮಿತಿಯೊಂದನ್ನು ರಚಿಸಿದೆ
* ಕಾಂಗ್ರೆಸ್ ನೇತೃತ್ವದಲ್ಲಿ ಒಟ್ಟು 8 ಪಕ್ಷಗಳು ಜುಲೈ 17ರಂದು ಒಡಿಶಾ ಬಂದ್‌ಗೆ ಕರೆ ನೀಡಿವೆ
* ತ್ವರಿತ ವಿಚಾರಣೆಗಾಗಿ ತಂಡವೊಂದನ್ನು ಪೊಲೀಸರು ಈಗಾಗಲೇ ರಚಿಸಿದ್ದಾರೆ. ಆಂತರಿಕ ದೂರು ಸಮಿತಿಗೆ ವಿದ್ಯಾರ್ಥಿನಿ ನೀಡಿದ ದೂರನ್ನೇ ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ
* ತನಗಾದ ದೌರ್ಜನ್ಯದ ಕುರಿತು ನ್ಯಾಯ ಕೊಡಿಸುವಂತೆ ವಿದ್ಯಾರ್ಥಿನಿಯು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಸ್ಥಳೀಯ ಶಾಸಕ ಒಡಿಶಾ ಮುಖ್ಯಮಂತ್ರಿ ಹಾಗೂ ಸಂಸದರಿಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದರು
‘ಮೌನ ಬೇಡ ಉತ್ತರ ಬೇಕು’ ಇದು ಆತ್ಮಹತ್ಯೆಯಲ್ಲ. ಬಿಜೆಪಿ ವ್ಯವಸ್ಥೆಯು ನಡೆಸಿರುವ ಯೋಜಿತ ಹತ್ಯೆ. ನ್ಯಾಯ ನೀಡುವ ಬದಲು ಆಕೆಯನ್ನು ಅವಮಾನಿಸಲಾಯಿತು ಬೆದರಿಸಲಾಯಿತು. ಮೋದಿ ಅವರೇ ಒಡಿಶಾ ಅಥವಾ ಮಣಿಪುರ ಇರಬಹುದು– ಈ ದೇಶದ ಹೆಣ್ಣುಮಕ್ಕಳು ಸುಟ್ಟು ಹೋಗುತ್ತಿದ್ದಾರೆ ಕುಸಿದು ಹೋಗುತ್ತಿದ್ದಾರೆ. ಅವರಿಗೆ ಉಸಿರುಗಟ್ಟುವ ವಾತಾವರಣವಿದೆ. ಮತ್ತೆ ನೀವು? ಸುಮ್ಮನೆ ಕೂತಿದ್ದೀರಿ. ಈ ದೇಶಕ್ಕೆ ನಿಮ್ಮ ಮೌನ ಬೇಡ. ನಿಮ್ಮ ಉತ್ತರ ಬೇಕುರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.