ಭೂಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಣ್ಣಗಾದ ಹಾಗೂ ಕಳಪೆ ಟೀ ಪೂರೈಸಿದ ಆರೋಪದ ಮೇಲೆ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಲಾಗಿದೆ.
ಛಾತರ್‌ಪುರ್ ಜಿಲ್ಲೆಯ ಪಿಡಬ್ಲೂಡಿ ಇಲಾಖೆಯ ಕಿರಿಯ ಅಧಿಕಾರಿ ರಾಕೇಶ್ ಕನೌಹಾ ಅವರಿಗೆ ರಾಜನಗರ್ ವಿಭಾಗದ ಸಹಾಯಕ ಕಮೀಷನರ್ ಡಿ.ಪಿ ದ್ವಿವೇದಿ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಏನಾಗಿತ್ತು?
ಸಿಎಂ ಚೌಹಾಣ್ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿದ್ದರು. ಈ ಸಲುವಾಗಿ ಅವರು ಖಜರಾಹೊ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿಗೆ ಎಂದು ಕೆಲಕಾಲ ತಂಗಿದ್ದರು. ಈ ವೇಳೆ ಅವರಿಗೆ ಉಪಹಾರ ಹಾಗೂ ಟೀಯನ್ನು ಪೂರೈಕೆ ಮಾಡಲಾಗಿತ್ತು. ರಾಕೇಶ್ ಅವರು ಸಿಎಂ ಆತಿಥ್ಯದ ಹೊಣೆ ಹೊತ್ತಿದ್ದರು.
ಪೂರೈಸಿದ ಟೀ ಕಳಪೆಯಾಗಿದ್ದಲ್ಲದೇ ತಣ್ಣಗಾಗಿ ಹೋಗಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದು ವಿಐಪಿ ಒಬ್ಬರ ಶಿಷ್ಟಾಚಾರದ ಉಲ್ಲಂಘನೆ ಹಾಗೂ ಜಿಲ್ಲೆಗೆ ಅವಮಾನ ಎಂದು ತಿಳಿದು ರಾಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್‌ಗೆ ಉತ್ತರಿಸಲು ಎರಡು ದಿನವನ್ನು ರಾಕೇಶ್ ಅವರಿಗೆ ನೀಡಲಾಗಿದೆ. ಸೂಕ್ತ ಕಾರಣ ನೀಡದಿದ್ದರೇ ಅವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮೀಷನರ್ ದ್ವಿವೇದಿ ತಿಳಿಸಿರುವುದಾಗಿ ‘ದಿ ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.