ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಪಿಟಿಐ
Published 26 ಮಾರ್ಚ್ 2022, 4:38 IST
Last Updated 26 ಮಾರ್ಚ್ 2022, 4:38 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ಮುಂಬೈ: ಕಳೆದ 5 ದಿನಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದೆ. ಇದು ಭಾರತ ಸರ್ಕಾರದ ನಿಯಂತ್ರಣವನ್ನು ಮೀರಿದ್ದು ಎಂದು ಹೇಳಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಎಬಿಪಿ ನೆಟ್‌ವರ್ಕ್‌ನ 'Ideas of India' ಶೃಂಗಸಭೆಯಲ್ಲಿ ಮಾತನಾಡಿದ ಅವರು, 'ಕೆಲವೊಮ್ಮೆ ಹಿಂದುತ್ವವನ್ನು ತಪ್ಪು ರೀತಿಯಲ್ಲಿ ಬಿಂಬಿಸಲಾಗುತ್ತದೆ' ಎಂದು ಹೇಳಿದರು.

'ಭಾರತದಲ್ಲಿ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಮಧ್ಯೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಳಿತ ಕಾಣುತ್ತಿವೆ. ಈ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ' ಎಂದು ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಮತ್ತು ಈ ಸಮಸ್ಯೆಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂದು ಕೇಳಿದಾಗ ಅವರು ಉತ್ತರಿಸಿದರು.

ADVERTISEMENT

ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಶನಿವಾರ ಲೀಟರ್‌ಗೆ ತಲಾ 80 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ ಇದು ನಾಲ್ಕನೇ ಬಾರಿಗೆ ದರ ಏರಿಕೆಯಾಗಿದೆ. ಈ ಹಿಂದೆ ಮಂಗಳವಾರ, ಬುಧವಾರ ಮತ್ತು ಶುಕ್ರವಾರ ದರ ಏರಿಸಲಾಗಿತ್ತು. ಸುಮಾರು ನಾಲ್ಕೂವರೆ ತಿಂಗಳ ಅಂತರದ ಬಳಿಕ ಮಾರ್ಚ್‌ 22ರಿಂದ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಲಾಗುತ್ತಿದೆ. ಐದು ದಿನಗಳಲ್ಲಿ ತೈಲ ದರ ಪ್ರತಿ ಲೀಟರ್‌ಗೆ ಒಟ್ಟು ₹ 3.20 ರಷ್ಟು ಹೆಚ್ಚಳ ಕಂಡಿದೆ.

'ಭಾರತವು ಶೀಘ್ರದಲ್ಲೇ ₹ 40,000 ಕೋಟಿ ಎಥೆನಾಲ್, ಮೆಥೆನಾಲ್ ಮತ್ತು ಜೈವಿಕ-ಎಥೆನಾಲ್ ಉತ್ಪಾದನಾ ಆರ್ಥಿಕತೆಯನ್ನು ಹೊಂದಲಿದೆ. ಇದು ಪೆಟ್ರೋಲಿಯಂ ಆಮದುಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ' ಎಂದು ಅವರು ಹೇಳಿದರು.

ಭಾರತದಲ್ಲಿನ ಪ್ರಮುಖ ಕಾರು ಮತ್ತು ದ್ವಿಚಕ್ರ ವಾಹನ ತಯಾರಕರು ಫ್ಲೆಕ್ಸ್-ಇಂಧನ ಎಂಜಿನ್‌ (ದ್ವಿ-ಇಂಧನ ವಾಹನ) ಗಳೊಂದಿಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದಾರೆ. ಇವುಗಳನ್ನು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಜಾತಿ, ಧರ್ಮ, ಭಾಷೆ ಅಥವಾ ಲಿಂಗದ ಆಧಾರದ ಮೇಲಿನ ಯಾವುದೇ ತಾರತಮ್ಯವನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಹಿಂದುತ್ವ ಎನ್ನುವುದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಹಿಂದುತ್ವದ ಮೂಲಕ ಪರಿಕಲ್ಪನೆಯೇ ಎಲ್ಲರಿಗೂ ನ್ಯಾಯ ನೀಡುವುದಾಗಿದೆ. ರಾಷ್ಟ್ರೀಯತೆಯೇ ಬಿಜೆಪಿಯ ಮೊದಲ ಗುರಿ. ಎರಡನೆಯದಾಗಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ. ಮೂರನೆಯದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರನ್ನು ತಳಮಟ್ಟದಿಂದ ಮೇಲೆತ್ತುವುದಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.