ADVERTISEMENT

ಮತಕಳವು | ಇಂಡಿಯಾ ಕೂಟಕ್ಕೆ ಸಂಬಂಧವಿಲ್ಲ: ಒಮರ್‌ ಅಬ್ದುಲ್ಲಾ

ಪಿಟಿಐ
Published 15 ಡಿಸೆಂಬರ್ 2025, 15:56 IST
Last Updated 15 ಡಿಸೆಂಬರ್ 2025, 15:56 IST
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ   

ಶ್ರೀನಗರ: ಕಾಂಗ್ರೆಸ್‌ ಪ್ರಸ್ತಾಪಿಸಿರುವ ‘ಮತ ಕಳವು’ ವಿಚಾರದಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು, ‘ಇಂಡಿಯಾ ಕೂಟಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸೋಮವಾರ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮತಕಳ್ಳ ಅಧಿಕಾರ ಬಿಡು’ ರ್‍ಯಾಲಿಯಲ್ಲಿ ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಅದರ ಮರುದಿನ (ಸೋಮವಾರ) ಒಮರ್ ಅಬ್ದುಲ್ಲಾ ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

‘ಮತಕಳವು ಆಡಳಿತ ಪಕ್ಷದ (ಬಿಜೆಪಿ) ಡಿಎನ್‌ಎದಲ್ಲೇ ಇದೆ. ಜನರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅದರ ನಾಯಕರು ದ್ರೋಹಿಗಳು. ಈ ನಾಯಕರನ್ನು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದು ಕಾಂಗ್ರೆಸ್ ನಾಯಕರು ರ್‍ಯಾಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

‘ಇಂಡಿಯಾ’ ಕೂಟದ ಭಾಗವಾಗಿರುವ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಅವರು, ‘ಮತ ಕಳವು’ ಆರೋಪ ಕುರಿತ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಕಾರ್ಯಸೂಚಿಯನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಕಾಂಗ್ರೆಸ್‌ ಪಕ್ಷ ‘ಮತಕಳವು’ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಕಾರ್ಯಸೂಚಿಯಾಗಿಸಿಕೊಂಡಿದೆ. ಅವರಿಗೆ ಬೇರೆಯದನ್ನು ಹೇಳಲು ನಾವು ಯಾರು?’ ಎಂದಿದ್ದಾರೆ.

ಮತ್ತೊಂದೆಡೆ ‘ ಮತಕಳವು ವಿರುದ್ಧ 6 ಕೋಟಿ ಸಹಿ ಸಂಗ್ರಹ ಮಾಡಿದ್ದು, ಅವುಗಳನ್ನು ರಾಷ್ಟ್ರಪತಿ ಮುಂದೆ ಹಾಜರುಪಡಿಸುತ್ತೇವೆ’ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.