ADVERTISEMENT

ಓಮೈಕ್ರಾನ್‌: ನಿರ್ಬಂಧಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

ಕೋವಿಡ್‌ ದೃಢ ಪ್ರಮಾಣ ಹೆಚ್ಚು ಇದ್ದಲ್ಲಿ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 4:15 IST
Last Updated 22 ಡಿಸೆಂಬರ್ 2021, 4:15 IST
ದೆಹಲಿಯ ಕಾಮನ್‌ವೆಲ್ತ್ ಕ್ರೀಡಾಗ್ರಾಮದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿನ ಹಾಸಿಗೆ ವ್ಯವಸ್ಥೆಯನ್ನು ಅಧಿಕಾರಿಯೊಬ್ಬರು ಮಂಗಳವಾರ ಪರಿಶೀಲಿಸಿದರು–ಪಿಟಿಐ ಚಿತ್ರ
ದೆಹಲಿಯ ಕಾಮನ್‌ವೆಲ್ತ್ ಕ್ರೀಡಾಗ್ರಾಮದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿನ ಹಾಸಿಗೆ ವ್ಯವಸ್ಥೆಯನ್ನು ಅಧಿಕಾರಿಯೊಬ್ಬರು ಮಂಗಳವಾರ ಪರಿಶೀಲಿಸಿದರು–ಪಿಟಿಐ ಚಿತ್ರ   

ನವದೆಹಲಿ: ದೇಶದಲ್ಲಿ ಓಮೈಕ್ರಾನ್ ರೂಪಾಂತರ ತಳಿಯ ಕೋವಿಡ್ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿವೆ. ಎರಡೂ ರಾಜ್ಯಗಳಲ್ಲಿ ತಲಾ 54 ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ‘ಕೋವಿಡ್‌ ದೃಢಪಡುವ ಪ್ರಮಾಣ ಅಧಿಕವಾಗಿರುವ ಜಿಲ್ಲೆಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ದೇಶದಲ್ಲಿ ಕೋವಿಡ್‌–19 ತೀವ್ರತೆ ಇಳಿಕೆಯಾಗುತ್ತಿತ್ತು. ಆದರೆ ಈ ಓಮೈಕ್ರಾನ್‌ ಹರಡುವಿಕೆ ವ್ಯಾಪಕವಾಗುತ್ತಿರುವ ಕಾರಣ, ದೇಶದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ಒಂದು ವಾರದ ಅವಧಿಯಲ್ಲಿ ಕೋವಿಡ್‌ ದೃಢಪಡುವ ಪ್ರಮಾಣವು ಶೇ 10ರಷ್ಟು ಮತ್ತು ಅದಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ನಿಯಂತ್ರಣ ಕ್ರಮಗಳು ಮತ್ತು ನಿರ್ಬಂಧಗಳನ್ನು ಜಾರಿಗೆ ತನ್ನಿ. ಜಿಲ್ಲೆಯಲ್ಲಿ ಲಭ್ಯವಿರುವ ತೀವ್ರ ನಿಗಾ ಘಟಕಗಳು ಮತ್ತು ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ ಹಾಸಿಗೆಗಳ ಭರ್ತಿ ಪ್ರಮಾಣವು ಶೇ 40ನ್ನು ದಾಟಿದರೆ, ಆ ಜಿಲ್ಲೆಗಳಲ್ಲೂ ನಿಯಂತ್ರಣ ಕ್ರಮ ಮತ್ತು ನಿರ್ಬಂಧಗಳನ್ನು ಜಾರಿಗೆ ತನ್ನಿ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ADVERTISEMENT

‘ಡೆಲ್ಟಾಗಿಂತ ಓಮೈಕ್ರಾನ್‌ ರೂಪಾಂತರ ತಳಿಯು ಮೂರು ಪಟ್ಟು ಹೆಚ್ಚು ತೀವ್ರವಾಗಿ ಹರಡುತ್ತದೆ. ಜತೆಗೆ ದೇಶದ ಹಲವೆಡೆ ಇನ್ನೂ ಡೆಲ್ಟಾ ಪ್ರಕರಣಗಳು ಇವೆ. ಇವುಗಳನ್ನು ಗಮನದಲ್ಲಿ ಇರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

200 ಪ್ರಕರಣಗಳಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಲ್ಲೇ ಒಟ್ಟು 108 ಪ್ರಕರಣಗಳು ಪತ್ತೆಯಾಗಿವೆ. ತೆಲಂಗಾಣದಲ್ಲಿ 20, ಕರ್ನಾಟಕದಲ್ಲಿ 19, ರಾಜಸ್ಥಾನದಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ. ಓಮೈಕ್ರಾನ್‌ ದೃಢಪಟ್ಟ 200 ಜನರಲ್ಲಿ ಬಹುತೇಕ ಮಂದಿ ವಿದೇಶಗಳಿಂದ ಹಿಂದಿರುಗಿದವರು ಮತ್ತು ಅವರ ಸಂಪರ್ಕಿತರು.

ಓಮೈಕ್ರಾನ್‌ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಈಗ ವಿದೇಶಗಳಿಂದ ವಾಪಸ್ಸಾಗುತ್ತಿರುವವವರಲ್ಲಿ ಓಮೈಕ್ರಾನ್‌ ಪ್ರಕರಣಗಳು ಹೆಚ್ಚು ದೃಢಪಡುತ್ತಿವೆ. ಮುಂದಿನ ದಿನಗಳಲ್ಲಿ, ಸಮುದಾಯದ ಮಟ್ಟದಲ್ಲಿಯೇ ಓಮೈಕ್ರಾನ್‌ನ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಅಪಾಯವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ವಿದೇಶಿ ಪ್ರಯಾಣ ಮಾಡದವರು ಮತ್ತು ಅಂತಹವರ ಸಂಪರ್ಕಕ್ಕೆ ಬಾರದೇ ಇದ್ದವರಲ್ಲೂ ಓಮೈಕ್ರಾನ್‌ ದೃಢಪಟ್ಟಿದೆ. ಓಮೈಕ್ರಾನ್‌ ಸ್ಥಳೀಯ ಮಟ್ಟದಲ್ಲಿಯೂ ಹರಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಬೆಂಗಳೂರಿನ ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ವೈರಾಣುರೋಗ ಶಾಸ್ತ್ರಜ್ಞ ಗಿರಿಧರ ಬಾಬು ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ತೀವ್ರವಾಗಿದ್ದ ವೇಳೆ, ಕೋವಿಡ್‌ ದೃಢಪಟ್ಟವರಲ್ಲಿ ಆಸ್ಪತ್ರೆ ಸೇರುತ್ತಿದ್ದವರ ಪ್ರಮಾಣ ಶೇ 19ರಷ್ಟಿತ್ತು. ಅಲ್ಲಿ ಓಮೈಕ್ರಾನ್‌ ತೀವ್ರವಾಗಿರುವಾಗ ಆಸ್ಪತ್ರೆ ಸೇರುವವರ ಪ್ರಮಾಣ ಶೇ 1.8ರಷ್ಟಿದೆ. ಭಾರತದಲ್ಲಿ ಇದೇ ಸ್ಥಿತಿ ಬಂದರೆ, ಆಸ್ಪತ್ರೆ ಸೇರುವವರ ಸಂಖ್ಯೆ ವಿಪರೀತವಾಗಿರುತ್ತದೆ. ಇದನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆ ಸಿದ್ಧವಾಗಿರಬೇಕು’ ಎಂದು ದೆಹಲಿ ಸರ್ಕಾರದ ಕೋವಿಡ್‌ ಸಲಹಾ ಸಮಿತಿಯ ಸದಸ್ಯರಾದ ಸಂದೀಪ್ ಬಿ. ಅವರು ಹೇಳಿದ್ದಾರೆ.

‘ವಿಮಾನ ಸಂಚಾರ ನಿಲ್ಲಿಸಿ’
‘ದೆಹಲಿಯಲ್ಲಿ ಪತ್ತೆಯಾಗಿರುವ 54 ಪ್ರಕರಣಗಳಲ್ಲಿ ಮೂವರಿಗೆ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲ. ಓಮೈಕ್ರಾನ್‌ ಹರಡುವುದನ್ನು ತಡೆಗಟ್ಟಲು ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ಪರಿಣಾಮಕಾರಿ ಕ್ರಮ’ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

‘ವಿದೇಶಗಳಿಂದ ಬರುತ್ತಿರುವ ಬಹಳಷ್ಟು ಮಂದಿ, ಅಲ್ಲಿಂದ ಹೊರಡುವ ಮುನ್ನ ಮಾಡಿಸಿದ ಪರೀಕ್ಷೆಯಲ್ಲಿ ಕೋವಿಡ್‌ ಇಲ್ಲ ಎಂದು ವರದಿ ಬಂದಿರುತ್ತದೆ. ಆದರೆ ಇಲ್ಲಿಗೆ ಬಂದು ಇಳಿದಾಗ ನಡೆಸುವ ಪರೀಕ್ಷೆಯಲ್ಲಿ ಕೋವಿಡ್‌ ಇರುವುದು ದೃಢಪಟ್ಟಿದೆ. ಹೀಗಾಗಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

*
ಓಮೈಕ್ರಾನ್‌ ಪ್ರಕರಣಗಳಲ್ಲಿ ಏರಿಕೆಯಾಗುವುದನ್ನು ನಾವು ನೋಡಲಿದ್ದೇವೆ. ಆ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಬೇಕಷ್ಟೆ.
–ಅನುರಾಗ್ ಅಗರ್ವಾಲ್, ದೆಹಲಿಯ ಜಿನೋಮಿಕ್ಸ್ ಸಂಸ್ಥೆ ನಿರ್ದೇಶಕ

*
ಬೇರೆ ದೇಶಗಳಲ್ಲಿ ಓಮೈಕ್ರಾನ್‌ ಪ್ರಕರಣಗಳು ದಿಢೀರ್ ಎಂದು ಏರುತ್ತಿವೆ. ಭಾರತದಲ್ಲಿ ಈ ರೀತಿ ಆಗುವುದಿಲ್ಲ ಎಂದು ನಂಬಲು ಯಾವುದೇ ಕಾರಣವಿಲ್ಲ.
–ಗೌತಮ್ ಮೆನನ್, ಚೆನ್ನೈ ವಿ.ವಿ.ಯ ಗಣಿತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.