ADVERTISEMENT

ಓಮೈಕ್ರಾನ್‌ ರೂಪಾಂತರಿ 222ಕ್ಕೆ ಏರಿಕೆ: ಹೊಸ ವರ್ಷಾಚರಣೆ ಮೇಲೆ ಕರಿನೆರಳು

ಇತರೆ ಸಮಾರಂಭಗಳ ಮೇಲೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:45 IST
Last Updated 22 ಡಿಸೆಂಬರ್ 2021, 19:45 IST
ಕೋವಿಡ್ ಸಾಂಕ್ರಾಮಿಕದ ನಡುವೆಯೂ, ಬ್ರಿಟನ್‌ನ ವಿನ್‌ಚೆಸ್ಟರ್‌ನ ಬೀದಿಯೊಂದಲ್ಲಿ ಕ್ರಿಸ್‌ಮಸ್‌ ಹಬ್ಬದ ಖರೀದಿಗಾಗಿ ಜನರು ಸೇರಿದ್ದರು –ಎಪಿ ಚಿತ್ರ
ಕೋವಿಡ್ ಸಾಂಕ್ರಾಮಿಕದ ನಡುವೆಯೂ, ಬ್ರಿಟನ್‌ನ ವಿನ್‌ಚೆಸ್ಟರ್‌ನ ಬೀದಿಯೊಂದಲ್ಲಿ ಕ್ರಿಸ್‌ಮಸ್‌ ಹಬ್ಬದ ಖರೀದಿಗಾಗಿ ಜನರು ಸೇರಿದ್ದರು –ಎಪಿ ಚಿತ್ರ   

ನವದೆಹಲಿ/ಮುಂಬೈ: ದೇಶದಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಬುಧವಾರ 222ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಒಟ್ಟು 57 ಪ್ರಕರಣಗಳು ಮತ್ತು ಮಹಾರಾಷ್ಟ್ರದಲ್ಲಿ 61 ಪ್ರಕರಣಗಳು ಪತ್ತೆಯಾಗಿದೆ. ಎರಡೂ ಕಡೆ ಬುಧವಾರ ಕ್ರಮವಾಗಿ 125 ಮತ್ತು ಕೋವಿಡ್‌ನ 1201, ಹೊಸ ಪ್ರಕರಣಗಳು ಪತ್ತೆಯಾಗಿವೆ. ಎರಡೂ ಕಡೆಗಳಲ್ಲಿ 6 ತಿಂಗಳಲ್ಲಿ ಒಂದೇ ದಿನ ಪತ್ತೆಯಾದ ಗರಿಷ್ಠ ಪ್ರಕರಣಗಳ ಸಂಖ್ಯೆ ಇದು.

ದೆಹಲಿಯಲ್ಲಿ ಗುರುವಾರ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 624ಕ್ಕೆ ಏರಿಕೆಯಾಗಿದೆ. ಇದು ಐದು ತಿಂಗಳಲ್ಲೇ ಗರಿಷ್ಠ. ಕೋವಿಡ್‌ ಮತ್ತು ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ಏರಿಕೆಯಾದ ಬೆನ್ನಲ್ಲೇ ದೆಹಲಿ ಸರ್ಕಾರವು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ಆಚರಣೆ ಮತ್ತಿತರ ಸಮಾರಂಭಗಳ ಮೇಲೆ ನಿರ್ಬಂಧ ಹೇರಿದೆ. ಈ ಸಂಬಂಧ ದೆಹಲಿ ವಿಕೋಪ ನಿರ್ವಹಣಾ ಪ್ರಾಧಿಕಾರವು ಸುತ್ತೋಲೆ ಹೊರಡಿಸಿದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಜನರು ಗುಂಪುಗೂಡುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ‘ಎಲ್ಲಾ ರೀತಿಯ ಧಾರ್ಮಿಕ ಸಮಾರಂಭಗಳು, ಸಾಮಾಜಿಕ ಸಮಾರಂಭಗಳು, ರಾಜಕೀಯ ಸಭೆ/ರ‍್ಯಾಲಿಗಳು, ಮನೋರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬಕ್ಕೆ ಸಂಬಂಧಿಸಿದ ಸಾರ್ವಜನಿಕ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ADVERTISEMENT

ಮದುವೆ, ಸಭೆ, ಪ್ರದರ್ಶನ ಮತ್ತು ಸಮ್ಮೇಳನಗಳಂತಹ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ ಮತ್ತು ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ದೆಹಲಿಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ತಮ್ಮ ಸಾಮರ್ಥ್ಯದ ಶೇ 50ರಷ್ಟು ಆಸನಗಳನ್ನು ಮಾತ್ರವೇ ಭರ್ತಿ ಮಾಡಬಹುದು. ಮೆಟ್ರೋಗಳಲ್ಲಿ ಪ್ರತಿ ಕೋಚ್‌ನಲ್ಲಿ ಗರಿಷ್ಠ 30 ಜನರಷ್ಟೇ ಇರಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಎಲ್ಲಿ ಏನಾಗುತ್ತಿದೆ?

*ಕೋವಿಡ್ ಪ್ರಕರಣಗಳು ಹೆಚ್ಚಿದ ಕಾರಣ, ಉತ್ತರ ಚೀನಾದ ಕ್ಸಿಯಾನ್ ನಗರದ 1.3 ಕೋಟಿ ಜನರನ್ನು ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ

*ಫಿನ್ಲೆಂಡ್‌ನಲ್ಲಿ ಕ್ರಿಸ್‌ಮಸ್ ದಿನದಂದು ಬಾರ್‌ಗಳನ್ನು ರಾತ್ರಿ 9 ಗಂಟೆಗೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ

*ಕೇರಳದಲ್ಲಿ 9 ಮಂದಿಯಲ್ಲಿ ಓಮೈಕ್ರಾನ್ ತಳಿಯ ವೈರಾಣು ಪತ್ತೆಯಾಗಿದೆ. ರಾಜ್ಯದಲ್ಲಿ ಓಮೈಕ್ರಾನ್‌ನ ಪ್ರಕರಣಗಳ ಸಂಖ್ಯೆ 24ಕ್ಕೆ
ಏರಿಕೆಯಾಗಿದೆ

*ರಾಜಸ್ಥಾನದಲ್ಲಿ ನಾಲ್ಕು ಜನರಲ್ಲಿ ಓಮೈಕ್ರಾನ್ ತಳಿಯ ವೈರಾಣು ಕಾಣಿಸಿಕೊಂಡಿದೆ.

*ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರಗಳನ್ನು ಪೂರೈಸದಿದ್ದರೆ, ವೇತನ ನೀಡುವುದಿಲ್ಲ ಎಂದು ಪಂಜಾಬ್ ಸರ್ಕಾರವು ನೌಕರರಿಗೆ ತಿಳಿಸಿದೆ

*ಬ್ರಿಟನ್‌ನಲ್ಲಿ ಒಂದೇ ದಿನದಲ್ಲಿ 1.06 ಲಕ್ಷ ಕೋವಿಡ್‌ ಪ್ರಕರಣ ಗಳು ಪತ್ತೆಯಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.