ಕಿಶನ್‌ಗಂಜ್: ಕೆಲ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿ, ಕರಡು ಮತದಾರರ ಪಟ್ಟಿ ಪ್ರಕಟಿಸಿ 10 ದಿನಗಳೇ ಕಳೆದಿವೆ. ಆದರೆ, ಇಲ್ಲಿನ ಹೆಚ್ಚಿನ ಸಂಖ್ಯೆಯ ವಿವಾಹಿತ ಮಹಿಳೆಯರು ತಮ್ಮ ಪೌರತ್ವ ಸಾಬೀತುಪಡಿಸಲು ಮತ್ತು ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಇದಕ್ಕಾಗಿ ಅವರು ತಮ್ಮ ತಂದೆ ಮನೆಯ ವಾಸಸ್ಥಳದ ದೃಢೀಕರಣ ಪ್ರಮಾಣಪತ್ರಗಳನ್ನು ತರಬೇಕಿದ್ದು, ಅದನ್ನು ಪಡೆಯಲು ಹರಸಾಹಸಪಡುತ್ತಿದ್ದಾರೆ. ವಿವಾಹದ ಬಳಿಕ ವಿಳಾಸ ಬದಲಾದ ಕಾರಣ ಮಹಿಳೆಯರು ಅಗತ್ಯ ದಾಖಲೆಗಳನ್ನು ಹೊಂದಿಸಲು ಕಷ್ಟ ಪಡುತ್ತಿದ್ದ ದೃಶ್ಯ ರಾಜ್ಯದ ಕಿಶನ್‌ಗಂಜ್, ಬೇಗುಸರಾಯ್, ಪೂರ್ಣಿಯಾ ಜಿಲ್ಲೆಗಳಲ್ಲಿ ಕಂಡು ಬಂತು.
ನಿಯಮಗಳ ಪ್ರಕಾರ, ಅವರು ಶಾಲಾ ವರ್ಗಾವಣೆ ಪ್ರಮಾಣ ಪತ್ರಗಳು (ಟಿ.ಸಿ) ಅಥವಾ ಪೋಷಕರ ಹೆಸರಿನಲ್ಲಿರುವ ಆಸ್ತಿ ದಾಖಲೆಗಳನ್ನು ಒದಗಿಸಬೇಕು. ಅವುಗಳಲ್ಲಿ ಅವರ ಪೋಷಕರ ಹೆಸರು 2003ರ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವಂತೆ ಇರಬೇಕು.
ತಳ ಸಮುದಾಯದ ಜನರಿಗಂತೂ ಈ ದಾಖಲೆಗಳನ್ನು ಪಡೆಯುವುದು ಸವಾಲಾಗಿದೆ. ಕಾರಣ, ಈ ಸಮುದಾಯಗಳಲ್ಲಿನ ಬಹುತೇಕ ಮಹಿಳೆಯರು ಶಾಲೆಗೆ ಹೋಗಿಲ್ಲ. ಅಲ್ಲದೆ ಅವರ ಪೋಷಕರು ಯಾವುದೇ ಆಸ್ತಿಯನ್ನೂ ಹೊಂದಿಲ್ಲ. ಹೀಗಾಗಿ ದಾಖಲೆಗಳನ್ನು ಹುಡುಕುತ್ತಾ ಹತಾಶರಾಗಿರುವ ಹಲವು ಮಹಿಳೆಯರು ಬಹುತೇಕ ಗ್ರಾಮಗಳಲ್ಲಿ ಕಂಡು ಬರುತ್ತಾರೆ.
ಗಮನಿಸಬೇಕಾದ ಅಂಶ ಎಂದರೆ, ಕರಡು ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಹೆಸರುಗಳನ್ನು ಕೈಬಿಡಲಾಗಿದೆ.
ಈ ಬೆಳವಣಿಗೆಯು ಆಡಳಿತಾರೂಢ ಜೆಡಿಯು ಪಕ್ಷಕ್ಕೆ ಆತಂಕ ತರಿಸಿದೆ. ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಬಲಿಗರು ಎಂಬುದು ಇದಕ್ಕೆ ಕಾರಣ.
ಶಾಲಾ ಬಾಲಕಿಯರಿಗೆ ಉಚಿತ ಸೈಕಲ್, ಸಮವಸ್ತ್ರ ವಿತರಣೆ, ಮದ್ಯಪಾನ ನಿಷೇಧ ಕಾನೂನು ಜಾರಿ ಸೇರಿದಂತೆ ಹಲವು ಮಹಿಳಾ ಕೇಂದ್ರಿತ ಯೋಜನೆಗಳಿಗೆ ನಿತೀಶ್ ಕುಮಾರ್ ಕಾರಣರಾಗಿದ್ದಾರೆ. ಇವು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ ಎಂಬುದೂ ಗಮನಿಸಬೇಕಾದ ಅಂಶ. ಇದೆಲ್ಲ ನಿತೀಶ್ ಅವರಿಗೆ ವರದಾನವಾಗಿತ್ತು ಎಂದೂ ವಿಶ್ಲೇಷಿಸಲಾಗುತ್ತಿದೆ.
ಬೇಗುಸರಾಯ್‌ನ ಭರ‍್ರಾ ಗ್ರಾಮದ ದೇಗುಲದಲ್ಲಿ ಕುಳಿತಿದ್ದ ಮಹಿಳೆಯರ ಗುಂಪೊಂದು ಚರ್ಚೆಯಲ್ಲಿ ತೊಡಗಿತ್ತು. ಅವರಲ್ಲಿ ಒಬ್ಬರು 2003ರ ಮತದಾರರ ಪಟ್ಟಿಯ ಪ್ರತಿ ಹಿಡಿದು ಪರಿಶೀಲನೆಯಲ್ಲಿ ತೊಡಗಿದ್ದರು.
‘ಈ ಪಟ್ಟಿಯಲ್ಲಿ ನನ್ನ ಪೋಷಕರ ಹೆಸರುಗಳನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ ಆ ಮಹಿಳೆ, ‘ವಾಸಸ್ಥಳ ಪ್ರಮಾಣಪತ್ರ ಪಡೆಯುವ ಮಾರ್ಗಗಳ ಕುರಿತು ತಿಳಿದುಕೊಳ್ಳುತ್ತಿದ್ದೇನೆ. ಏಕೆಂದರೆ ನನ್ನ ಬಳಿ ಜನನ ಪ್ರಮಾಣಪತ್ರ, ಟಿ.ಸಿ ಅಥವಾ ಇತರ ಯಾವುದೇ ದಾಖಲೆಗಳು ಇಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಈ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಮತದಾರರ ಪಟ್ಟಿಯಿಂದ ಶಾಶ್ವತವಾಗಿ ಹೆಸರನ್ನು ಕೈಬಿಡುವ ಅಪಾಯವಿದೆ. ಇದರಿಂದ ಚಿಂತೆ ಮತ್ತು ಆತಂಕ ಆಗುತ್ತಿದೆ’ ಎಂದು ಮತ್ತೊಬ್ಬ ಮಹಿಳೆ ಅಳಲು ತೋಡಿಕೊಂಡರು. ಹೆಸರು ಹೇಳಲು ಬಯಸದ ಈ ಮಹಿಳೆಯರು ಮಹಾದಲಿತ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ಪರಿಶಿಷ್ಟ ಜಾತಿಗಳಲ್ಲಿ ಕೆಳಮಟ್ಟದ ಸಮುದಾಯ ಎಂದು ಹೇಳಲಾಗುತ್ತದೆ.
ತೊಂದರೆಗೆ ಒಳಗಾದ ಮತದಾರರಿಗಾಗಿ ವಿವಿಧೆಡೆ ಶಿಬಿರಗಳನ್ನು ತೆರೆದು ನೆರವು ನೀಡಲಾಗುತ್ತಿದೆ. ಆಲ್ಲಿಗೆ ಪರಿಹಾರಕ್ಕಾಗಿ ಬರುವ ಬಹುತೇಕರಲ್ಲಿ ನಿರಾಶೆ ಆವರಿಸಿದೆ. ‘ಇಲ್ಲಿನ ಮನೋಜ್ ಮಾಸ್ಟರ್ ಅವರು ನಮ್ಮ ಕಾಗದಪತ್ರಗಳನ್ನು ಎಸೆಯುತ್ತಿದ್ದಾರೆ. ಆಸ್ತಿ ದಾಖಲೆಗಳನ್ನು ತನ್ನಿ ಎಂದು ಹೇಳುತ್ತಿದ್ದಾರೆ. ನನ್ನ ಪೋಷಕರು ಮೃತಪಟ್ಟಿದ್ದಾರೆ. ಈ ಅಧಿಕಾರಿಗಳು ಕೇಳುವ ದಾಖಲೆಗಳನ್ನು ಎಲ್ಲಿಂದ ತರಲಿ’ ಎಂದು ಅತ್ಯಂತ ಹಿಂದುಳಿದ ಸಮುದಾಯ ಎಂದು ಗುರುತಿಸಿರುವ ನಿಷಾದ್ ಸಮುದಾಯದ ಮಹಿಳೆ ಕಣ್ಣೀರು ಹಾಕಿದರು.
ಮಹಿಳೆಯರು ನಿಜವಾಗಿಯೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹಲವು ಮತಗಟ್ಟೆ ಹಂತದ ಮತದಾರರ ನೋಂದಣಿ ಅಧಿಕಾರಿಗಳು (ಬಿಎಲ್‌ಒ) ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೀಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಗೆ ಕಟ್ಟಕಡೆಯ ಆಯ್ಕೆಯಾಗಿ ಆಧಾರ್ ಕಾರ್ಡ್ ಅನ್ನು (ಇದು ಅಗತ್ಯವಿರುವ 11 ದಾಖಲೆಗಳ ಪಟ್ಟಿಯಲ್ಲಿ ಇಲ್ಲ) ಬಳಸಲು ಚುನಾವಣಾ ಆಯೋಗ ಬಿಎಲ್‌ಒಗಳಿಗೆ ಅವಕಾಶ ನೀಡುತ್ತದೆ. ಆದರೆ ಈ ರೀತಿಯ ಪ್ರಕರಣಗಳು ಪ್ರತಿ ಬಿಎಲ್‌ಒಗಳ ವ್ಯಾಪ್ತಿಯಲ್ಲಿ 10ರಿಂದ 15 ಮೀರಬಾರದು’ ಎಂದು ಪೂರ್ಣಿಯಾ ಜಿಲ್ಲೆಯ ಬಿಎಲ್‌ಒ ಒಬ್ಬರು ಮಾಹಿತಿ ನೀಡಿದರು.
ಪಶ್ಚಿಮ ಬಂಗಾಳದ ಜತೆಗೆ ಗಡಿ ಹಂಚಿಕೊಂಡಿರುವ ಕಿಶನ್‌ಗಂಜ್‌ನ ಅಂಗಡಿಯೊಂದರ ಮಾಲೀಕ ಸುನಿಲ್ ಕುಮಾರ್ ಶರ್ಮಾ ಅವರಲ್ಲೂ ಆತಂಕ ಮನೆ ಮಾಡಿತ್ತು. ಅವರ ಸೊಸೆ ಮಮತಾ ಕೋಲ್ಕತ್ತದವರು. ‘ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಇದೀಗ ಪ್ರಮಾಣಪತ್ರಗಳನ್ನು ಕೊಡಬೇಕಾಗಿದೆ. ಇಲ್ಲದಿದ್ದರೆ ಈ ಜನ ನನ್ನ ಸೊಸೆಯನ್ನು ಎಲ್ಲಿ ಬಾಂಗ್ಲಾದೇಶದವಳು ಎಂದು ಬಿಡುತ್ತಾರೋ ಎಂಬ ಆತಂಕ ಕಾಡುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
ನಾನು ಕೂಲಿ ಕಾರ್ಮಿಕಳು. ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸ ಮಾಡಲೋ ಅಥವಾ ಕಾಗದಪತ್ರಗಳಿಗಾಗಿ ಅಲೆದಾಡಲೋ, ನೀವೇ ಹೇಳಿನಿರ್ಮಲಾ ದೇವಿ, ಬೆಲದೌರ್ ಕ್ಷೇತ್ರ, ಖಗಾರಿಯಾ ಜಿಲ್ಲೆಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.