ADVERTISEMENT

ಪಶ್ಚಿಮ ಬಂಗಾಳ: ಮತಯಂತ್ರ ಅಕ್ರಮ ಕುರಿತು ಟಿಎಂಸಿ ಆರೋಪಕ್ಕೆ ಬಿಜೆಪಿ ಕಿಡಿ

ಏಜೆನ್ಸೀಸ್
Published 27 ಮಾರ್ಚ್ 2021, 8:50 IST
Last Updated 27 ಮಾರ್ಚ್ 2021, 8:50 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಮತಯಂತ್ರ ಅಕ್ರಮದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಟಿಎಂಸಿ ವಿರುದ್ಧ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಶನಿವಾರ ಮಾತನಾಡಿರುವ ಅವರು, 'ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲುವುದು ಖಚಿತವಾಗಿದೆ. ಮಮತಾ ಬ್ಯಾನರ್ಜಿ ಒತ್ತಡದಲ್ಲಿದ್ದಾರೆ. ಆದ್ದರಿಂದ, ಮತಯಂತ್ರಗಳ ತಿರುಚುವಿಕೆ ಬಗ್ಗೆ ಅವರು ಆರೋಪಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇಂದು(ಶನಿವಾರ) ಮೊದಲ ಹಂತದ ಮತದಾನ ನಡೆಯುತ್ತಿದೆ. 'ಕೆಲ ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ. ಟಿಎಂಸಿಗೆ ಮತ ಚಲಾಯಿಸಿದರೂ, ಬಿಜೆಪಿಗೆ ಮತ ಹೋಗುತ್ತದೆ. ಈ ಬಗ್ಗೆ ದೂರು ನೀಡಲು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಲಾಗುವುದು' ಎಂದು ಟಿಎಂಸಿ ಹೇಳಿತ್ತು.

ADVERTISEMENT

ಮೊದಲ ಹಂತದ ಮತದಾನ ನಡೆಯುತ್ತಿರುವ 30 ಕ್ಷೇತ್ರಗಳ ಪೈಕಿ 27ರಲ್ಲಿ ಪ್ರಸಕ್ತ ಟಿಎಂಸಿ ಶಾಸಕರು ಇದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಇನ್ನೊಂದು ಕ್ಷೇತ್ರದಲ್ಲಿ ಆರ್‌ಎಸ್‌ಪಿ ಶಾಸಕರಿದ್ದಾರೆ.

2019ರಲ್ಲಿ ಈ ಕ್ಷೇತ್ರಗಳ ಚಿತ್ರಣ ಬದಲಾಗಿದ್ದು, ಈ ಭಾಗದ ಎಲ್ಲಾ ಐದು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ತಲಾ 29 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಟಿಎಂಸಿಯ ಅಭ್ಯರ್ಥಿಗಳಿದ್ದಾರೆ. ಎಡಪಕ್ಷಗಳು, ಕಾಂಗ್ರೆಸ್‌ ಹಾಗೂ ಐಎಸ್‌ಎಫ್‌ ಮೈತ್ರಿಕೂಟವು 30 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.