ADVERTISEMENT

ದೆಹಲಿ: ಒಳಚರಂಡಿ ಸ್ವಚ್ಛಗೊಳಿಸುವಾಗ ಬಿದ್ದು ಕಾರ್ಮಿಕ ಸಾವು, ಮೂವರ ಸ್ಥಿತಿ ಗಂಭೀರ

ಪಿಟಿಐ
Published 17 ಸೆಪ್ಟೆಂಬರ್ 2025, 6:03 IST
Last Updated 17 ಸೆಪ್ಟೆಂಬರ್ 2025, 6:03 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ನವದೆಹಲಿ: ವಾಯುವ್ಯ ದೆಹಲಿಯ ಅಶೋಕ್ ವಿಹಾರ್‌ನಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ ಚರಂಡಿಗೆ ಬಿದ್ದು 40 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು (ಬುಧವಾರ) ತಿಳಿಸಿದ್ದಾರೆ.

ADVERTISEMENT

ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಅಶೋಕ್ ವಿಹಾರ್‌ನ ಮೂರನೇ ಹಂತದಲ್ಲಿರುವ ಹರಿಹರ ಅಪಾರ್ಟ್‌ಮೆಂಟ್ ಬಳಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು (ಕಾರ್ಮಿಕ) ಉತ್ತರ ಪ್ರದೇಶದ ಕಾಸ್‌ಗಂಜ್ ನಿವಾಸಿ ಅರವಿಂದ ಎಂದು ಗುರುತಿಸಲಾಗಿದೆ.

ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ದೀನ್ ದಯಾಳ್ ಉಪಾಧ್ಯಾಯ (ಡಿಡಿಯು) ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಆಸ್ಪತ್ರೆಗೆ ಕರೆದೊಯ್ಯೊವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದರು ಎಂದು ಉಪ ಪೊಲೀಸ್ ಆಯುಕ್ತ (ವಾಯುವ್ಯ) ಭೀಷಮ್ ಸಿಂಗ್ ಹೇಳಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ, ಉಳಿದ ಮೂವರ ಪೈಕಿ ಸೋನು ಮತ್ತು ನಾರಾಯಣ ಕಾಸ್‌ಗಂಜ್‌ನವರು ಹಾಗೂ ಇನ್ನೋರ್ವ ನರೇಶ್ ಎಂಬಾತ ಬಿಹಾರ ಮೂಲದವನು ಎಂದು ತಿಳಿದು ಬಂದಿದೆ. ಸದ್ಯ ತೀವ್ರ ಅಸ್ವಸ್ಥಗೊಂಡಿದ್ದ ಮೂವರನ್ನು ಕೂಡ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಈ ಮೂವರು ಕೂಡ ಕಟ್ಟಡ ನಿರ್ಮಾಣ ಕಂಪನಿಯೊಂದರಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು.

ಘಟನೆ ನಡೆದ ತಕ್ಷಣ ಸ್ಥಳ ಪರಿಶೀಲನೆ ನಡೆಸಲು ಅಪರಾಧ ತಂಡವನ್ನು ಕರೆಸಲಾಯಿತು. ಕಟ್ಟಡ ನಿರ್ಮಾಣ ಕಂಪನಿಯ ವ್ಯವಸ್ಥಾಪಕರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 106(1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ), 289 (ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಯಂತ್ರೋಪಕರಣಗಳೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುವುದು) ಮತ್ತು 337 (ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ನಕಲಿ ಮಾಡುವುದು) ಮತ್ತು ಕೈಯಿಂದ ಮಲ ಹೊರುವ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ 2013 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.