ಪ್ರಜಾವಾಣಿ ವಾರ್ತೆ
ಹೈದರಾಬಾದ್: ಬೆಂಗಳೂರು ಮೂಲದ ಉದ್ಯಮಿ ಕೆ. ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಕೆ.ವಿ ಪ್ರಶಾಂತ್ ರೆಡ್ಡಿ ಅವರನ್ನು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬುಧವಾರ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನಿಲ್ ಕುಮಾರ್ ರೆಡ್ಡಿ ಎಂಬವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯದಿಂದಾಗಿ ಇಬ್ಬರನ್ನೂ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅನಿಲ್ ಕುಮಾರ್ ರೆಡ್ಡಿಯನ್ನು ಕೊಲೆಯ ಪ್ರಮುಖ ಸಂಚುಕೋರ ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಕೊಲೆಯಾದ ವೀರಸ್ವಾಮಿ ಹಾಗೂ ಪ್ರಶಾಂತ್ ಬೆಂಗಳೂರಿನ ಕಾಡುಗೋಡಿಯ ಚಿನ್ನಸಂದ್ರದಲ್ಲಿ ವಾಸವಿದ್ದರು. ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನರಸರಾವ್‌ಪೇಟ ನ್ಯಾಯಾಲಯಕ್ಕೆ ತೆರಳಿದ್ದರು.
ಈ ವೇಳೆ ನ್ಯಾಯಾಲಯದ ಆವರಣದಿಂದ ಇಬ್ಬರನ್ನೂ ಕಾರಿನಲ್ಲಿ ಅಪಹರಿಸಿಕೊಂಡು ಹೋಗಲಾಗಿದೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಹಾಗೂ ಕಾರನ್ನು ಹಿಂಬಾಲಿಸಿಕೊಂಡೂ ಹೋಗಿದ್ದಾರೆ.
ಬಾಪಟ್ಲಾ ಜಿಲ್ಲೆಯ ಸಂತಮಗಳೂರಿನಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಬಡಾವಣೆಯೊಂದರ ಸ್ಥಳಕ್ಕೆ ಕಾರಿನಲ್ಲಿ ತೆರಳಿದ ಆರೋಪಿಗಳು ಅಲ್ಲಿ ತಂದೆ ಮಗ ಇಬ್ಬರನ್ನೂ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ತಂದೆ, ಮಗ ಇಬ್ಬರೂ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದರು. ವ್ಯವಹಾರ ಪಾಲುದಾರರಾದ ಗದ್ದಂ ಅನಿಲ್ ಕುಮಾರ್ ರೆಡ್ಡಿ ಹಾಗೂ ಸಂತಮಗಳೂರಿನ ರಘುರಾಮಿ ರೆಡ್ಡಿ ಅವರೊಂದಿಗೆ ಮೃತರಿಗೆ ಹಣಕಾಸಿನ ವ್ಯಾಜ್ಯವಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.