ADVERTISEMENT

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಸಹಜೀವನದ ಒಂದು ಅರ್ಜಿ ನೋಂದಣಿ 

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 14:24 IST
Last Updated 5 ಫೆಬ್ರುವರಿ 2025, 14:24 IST
ಏಕರೂಪ ನಾಗರಿಕ ಸಂಹಿತೆ
ಏಕರೂಪ ನಾಗರಿಕ ಸಂಹಿತೆ   

ಡೆಹ್ರಾಡೂನ್‌: ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಕ್ಕೆ ತಂದ ಮೊದಲ 10 ದಿನಗಳಲ್ಲಿ ಸಹಜೀವನ ಸಂಬಂಧದ ಕೇವಲ ಒಂದು ಅರ್ಜಿ ಪೋರ್ಟಲ್‌ನಲ್ಲಿ ನೋಂದಣಿಯಾಗಿದೆ.

ಸಹ ಜೀವನ ದಂಪತಿಗಳಿಂದ ಐದು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈವರೆಗೆ ಒಬ್ಬರ ಅರ್ಜಿಯನ್ನು ನೋಂದಣಿ ಮಾಡಲಾಗಿದೆ. ಉಳಿದ ನಾಲ್ವರ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಆಡಳಿತವಿರುವ ಉತ್ತರಾಖಂಡವು ಜನವರಿ 27ರಂದು ಯುಸಿಸಿ ಅನುಷ್ಠಾನಕ್ಕೆ ತಂದಿದ್ದು, ದೇಶದಲ್ಲಿ ಇದನ್ನು ಜಾರಿಗೆ ತಂದ ಮೊದಲ ರಾಜ್ಯವೆನಿಸಿದೆ. ಈ ಸಂಹಿತೆಯಡಿ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿ ಹಕ್ಕು ಹಾಗೂ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ಕಾನೂನುಗಳು ಎಲ್ಲ ಧರ್ಮದ ನಾಗರಿಕರಿಗೂ ಏಕರೂಪದ್ದಾಗಿರಲಿವೆ.  

ADVERTISEMENT

‘ಯುಸಿಸಿಗೆ ಜನರು ನಿರಾಸಕ್ತರಾಗಿರುವುದು ಆರಂಭದಲ್ಲಿಯೇ ಕಾಣಿಸುತ್ತಿದೆ. ಇಲ್ಲದಿದ್ದರೆ, ಸರ್ಕಾರದ ಸಮಿತಿಯು ಹೇಳಿಕೊಂಡಂತೆ ಕರಡು ಸಮಿತಿಯೊಂದಿಗೆ ಸಮಾಲೋಚನೆಯ ವೇಳೆ, ಯುಸಿಸಿ ಜಾರಿಗೆ ಒಲವು ತೋರಿದ್ದವರು ಈಗ ನೋಂದಣಿಗೆ ಅರ್ಜಿ ಸಲ್ಲಿಸಲು ಮುಂದೆ ಬರಬೇಕಿತ್ತಲ್ಲ’ ಎಂದು ಹೈಕೋರ್ಟ್ ವಕೀಲ ದುಷ್ಯಂತ್ ಮೈನಾಲಿ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

‘ಈ ರೀತಿಯ ಆರಂಭಿಕ ಪ್ರತಿಕ್ರಿಯೆಯ ಮತ್ತೊಂದು ಸಾಧ್ಯತೆಯೆಂದರೆ ಜನರು ತಮ್ಮ ವೈಯಕ್ತಿಕ ಸಂಬಂಧಗಳ ವಿವರಗಳನ್ನು ಅಧಿಕೃತ ವೇದಿಕೆಯಲ್ಲಿ ಬಹಿರಂಗಪಡಿಸಲು ಸಿದ್ಧರಿಲ್ಲ ಅಥವಾ ನಿರ್ದಿಷ್ಟ ಗಡುವಿನಲ್ಲಿ ತಮ್ಮ ಸಂಬಂಧವನ್ನು ನೋಂದಾಯಿಸಲು ಅರ್ಜಿ ಸಲ್ಲಿಸದ ಸಹ ಜೀವನದ ದಂಪತಿಗಳಿಗೆ ಕಠಿಣ ಶಿಕ್ಷೆ, ದಂಡ ವಿಧಿಸುವ ನಿಬಂಧನೆಗಳ ಬಗ್ಗೆ ಸಂಪೂರ್ಣ ಅರಿವು ಇಲ್ಲ’ ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ವಕೀಲ ಕಾರ್ತಿಕೇಯ ಹರಿ ಗುಪ್ತಾ ಅವರು ಇದನ್ನು ‘ಮಲಗುವ ಕೋಣೆಯಲ್ಲಿ ಇಣುಕಿ ನೋಡುವ’ ಕ್ರಮ. ಇಂಥದ್ದೆಲ್ಲ ಪೊಲೀಸ್ ರಾಜ್ಯಗಳಲ್ಲಿ ಕಂಡುಬರುತ್ತದೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.