ADVERTISEMENT

ವ್ಯಕ್ತಿ ಒಬ್ಬ, ಮೂರು ಹುದ್ದೆ, ಮೂರು ಸಂಬಳ!

ಇದು ಬಿಹಾರದಲ್ಲಿ ಮಾತ್ರ ಸಾಧ್ಯ

ಅಭಯ್ ಕುಮಾರ್
Published 25 ಆಗಸ್ಟ್ 2019, 19:45 IST
Last Updated 25 ಆಗಸ್ಟ್ 2019, 19:45 IST
   

ಪಟ್ನಾ: ಹೆಸರು ಸುರೇಶ್ ರಾಮ್. ಬಿಹಾರ ಸರ್ಕಾರದಲ್ಲಿ ಮೂರು ಹುದ್ದೆಗಳನ್ನು ಒಟ್ಟೊಟ್ಟಿಗೆ ನಿಭಾಯಿಸುತ್ತಿರುವ ಜಾದೂಗಾರ. ಕಳೆದ 30 ವರ್ಷಗಳಿಂದ ಮೂರೂ ಹುದ್ದೆಗಳಿಗೆ ಸಂಬಳ ಎಣಿಸುತ್ತಿರುವ ಭೂಪ.

ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ (ಸಿಎಫ್‌ಎಂಎಸ್) ಬಿಹಾರದಲ್ಲಿ ಜಾರಿಯಲ್ಲಿಲ್ಲದ ಕಾರಣ ಸುರೇಶ್ ಮೂರು ಹುದ್ದೆಗಳಲ್ಲಿ ಉಳಿದುಕೊಂಡಿದ್ದಾರೆ. ಈ ಹೊಸ ವ್ಯವಸ್ಥೆಯು ಉದ್ಯೋಗಿಯ ವಿವರಗಳಾದ ಆಧಾರ್, ಪಾನ್‌ ಕಾರ್ಡ್ ಜತೆ ಆತನ ವೇತನ, ವೆಚ್ಚ, ಆಸ್ತಿ ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡಿರುತ್ತದೆ.

ಈ ವ್ಯವಸ್ಥೆಗೆ ಸೇರ್ಪಡೆಯಾಗಲು ಅಗತ್ಯ ದಾಖಲೆಗಳನ್ನು ನೀಡುವಂತೆ ಸುರೇಶ್‌ಗೆ ಸೂಚಿಸಲಾಗಿತ್ತು. ದಾಖಲೆ ಒದಗಿಸಲು ವಿಫಲಗೊಂಡ ಕಾರಣ ಕೃಷ್ಣಗಂಜ್‌ ಠಾಣೆಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಾಯಿತು.

ADVERTISEMENT

ಯಾವಾಗ ಎಫ್‌ಐಆರ್ ದಾಖಲಾಯಿತೋ, ಅಂದಿನಿಂದ ಸುರೇಶ್ ನಾಪತ್ತೆ. ಆರೋಪಿ ಬಂಧನಕ್ಕೆ ನಾಲ್ವರು ಪೊಲೀಸರ ತಂಡ ರಚಿಸಲಾಗಿದೆ. ಬಂಧಿಸಲು ಸಾಧ್ಯವಾಗದಿದ್ದಲ್ಲಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಮೊರೆ ಹೋಗುವುದಾಗಿ ಎಸ್‌ಪಿ ಕುಮಾರ್ ಆಶಿಶ್ ತಿಳಿಸಿದ್ದಾರೆ.

ಎಲ್ಲೆಲ್ಲೂ ನಾನೇ..

1988ರಲ್ಲಿ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಸುರೇಶ್‌ಗೆ ಮೊದಲ ಹುದ್ದೆ ಸಿಕ್ಕಿತ್ತು. ಅದರ ಮರುವರ್ಷವೇ ಜಲಸಂಪನ್ಮೂಲ ಇಲಾಖೆಗೆ ಸೇರಿದರು. ಸ್ವಲ್ಪ ಸಮಯದಲ್ಲಿ ಇದೇ ಇಲಾಖೆಯಲ್ಲಿ ಮತ್ತೊಂದು ಹುದ್ದೆ ಲಭ್ಯವಾಗಿ, ಸುಪೌಲ್ ಎಂಬಲ್ಲಿಗೆ ನಿಯೋಜನೆಗೊಂಡರು.

‘ಹೊಸ ಹುದ್ದೆ ಸಿಕ್ಕ ಬಳಿಕ ಅವರು ಹಿಂದಿನ ಹುದ್ದೆಗೆ ರಾಜೀನಾಮೆ ನೀಡದೇ ಎಲ್ಲ ಹುದ್ದೆಗಳಲ್ಲಿಯೂ ಉಳಿದುಕೊಂಡರು. ಏಕಕಾಲಕ್ಕೆ ಸಂಬಳವನ್ನೂ ಪಡೆದರು. ಮೇಲಾಗಿ 2018ರಲ್ಲಿ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯನ್ನೂ ಪಡೆದಿದ್ದು, ನಿವೃತ್ತಿಯ ಅಂಚಿಗೆ ಬಂದಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.