ADVERTISEMENT

ತೃಣಮೂಲ ಕಾಂಗ್ರೆಸ್ ತೊರೆದ ಮತ್ತೊಬ್ಬ ಶಾಸಕ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 9:08 IST
Last Updated 18 ಡಿಸೆಂಬರ್ 2020, 9:08 IST
ಮಮತಾ ಬ್ಯಾನರ್ಜಿ(ಪಿಟಿಐ ಚಿತ್ರ)
ಮಮತಾ ಬ್ಯಾನರ್ಜಿ(ಪಿಟಿಐ ಚಿತ್ರ)   

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಮತ್ತೊಬ್ಬ ಶಾಸಕನನ್ನು ಕಳೆದುಕೊಂಡಿದೆ. ಶಾಸಕ ಶೀಲಭದ್ರ ದತ್ತ ಬೆಳಗ್ಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಕಳೆದ ಎರಡು ದಿನಗಳಿಂದ ಪಕ್ಷ ತೊರೆದ ಮೂರನೇ ಶಾಸಕರಾಗಿದ್ದಾರೆ.

ನಿನ್ನೆಯಷ್ಟೇ ಸುವೆಂದು ಅಧಿಕಾರಿ ಮತ್ತು ಜಿತೇಂದ್ರ ತಿವಾರಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಐದು ತಿಂಗಳು ಬಾಕಿ ಇರುವ ಈ ಸಂದರ್ಭದಲ್ಲಿ ಶಾಸಕರ ಸರಣಿ ರಾಜೀನಾಮೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.

ಪಕ್ಷ ಬಿಡುತ್ತಿರುವ ಭಿನ್ನಮತೀಯರು ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ADVERTISEMENT

ಶೀಲಭದ್ರ ದತ್ತಾ ಅವರು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಪತ್ರವನ್ನು ಇ–ಮೇಲ್‌ ಮೂಲಕ ಕಳುಹಿಸಿದ್ದಾರೆ.

‘ಪಕ್ಷದ ಪ್ರಸ್ತುತ ಪರಿಸ್ಥಿತಿಗೆ ನಾನು ಸೂಕ್ತ ವ್ಯಕ್ತಿಯಲ್ಲ. ಹಾಗಾಗಿ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಶಾಸಕ ಸ್ಥಾನಕ್ಕಲ್ಲ’ ಎಂದು ಅವರು ಶೀಲಭದ್ರ ಅವರು ವರದಿಗಾರರಿಗೆ ತಿಳಿಸಿದರು.

‘ನಾನು ಶಾಸಕ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಲಿ. ಜನರು ನನ್ನನ್ನು ಶಾಸಕನಾಗಿ ಆರಿಸಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡಿದರೆ ಅವರು ಸಹಾಯಕ್ಕಾಗಿ ಯಾರ ಬಳಿ ಹೋಗಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಕೆಲ ತಿಂಗಳಿನಿಂದ ದತ್ತಾ ಅವರು ಪಕ್ಷದ ನಾಯಕತ್ವದ ಬಗ್ಗೆಯೂ ಪ್ರಶ್ನಿಸಿದ್ದರು.

ನಿನ್ನೆ ರಾಜೀನಾಮೆ ನೀಡಿದ ಸುವೆಂದು ಅಧಿಕಾರಿ 2016ರ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ, ಸುವೆಂದು ಸೇರ್ಪಡೆ ಬಿಜೆಪಿಗೆ ದೊಡ್ಡ ಲಾಭ ಎಂದೇ ಪರಿಗಣಿಸಲಾಗುತ್ತಿದೆ.

ಮಾಜಿ ಸಚಿವ ಶ್ಯಾಮಪ್ರಸಾದ್‌ ಮುಖರ್ಜಿ ಅವರು ಕೂಡ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.