ADVERTISEMENT

ಯುಪಿಎ ಅವಧಿಯಲ್ಲಿ ಒಪ್ಪಂದ | ವಿಮಾನ ಖರೀದಿ ಅಕ್ರಮ: ದೂರು

₹ 2,895 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
   

ನವದೆಹಲಿ: ಭಾರತೀಯ ವಾಯುಪಡೆಗಾಗಿ 2009ರಲ್ಲಿ 75 ಪೈಲಟಸ್‌ ಬೇಸಿಕ್‌ ತರಬೇತಿ ವಿಮಾನಗಳನ್ನು ಖರೀದಿಸಿದ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ಮೂಡಿದ್ದು, ಶಸ್ತ್ರಾಸ್ತ್ರ ವಿತರಕ ಸಂಜಯ್‌ ಭಂಡಾರಿ ಮತ್ತು ಇತರರ ವಿರುದ್ಧ ಸಿಬಿಐ ಶನಿವಾರ ದೂರು ದಾಖಲಿಸಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ₹ 2,895 ಕೋಟಿ ವೆಚ್ಚದಲ್ಲಿ ಈ ವಿಮಾನಗಳನ್ನು ಖರೀದಿಸಲಾಗಿತ್ತು.

ಪ್ರಕರಣ ದಾಖಲಾದ ಹಿಂದೆಯೇ ಸಿಬಿಐ ಅಧಿಕಾರಿಗಳು ದೆಹಲಿಯ ಎನ್‌ಸಿಆರ್‌ನಲ್ಲಿರುವ ಭಂಡಾರಿ ಅವರ ನಿವಾಸ, ಕಚೇರಿ, ಪೈಲಟಸ್‌ ಸಂಸ್ಥೆಯ ಕಚೇರಿ ಸೇರಿದಂತೆ ಒಂಬತ್ತು ಕಡೆ ದಾಳಿ ನಡೆಸಿದ್ದಾರೆ. ‘ಖರೀದಿ ವಹಿವಾಟಿನಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ’ ಎಂದು ಸಿಬಿಐ ಹೇಳಿದೆ.

ADVERTISEMENT

ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯದ ಕೆಲ ಅಧಿಕಾರಿಗಳು ಹಾಗೂ ಸ್ವಿಟ್ಜರ್‌ರ್ಲೆಂಡ್ ಮೂಲದ ಪೈಲಟಸ್‌ ಏರ್‌ಕ್ರಾಫ್ಟ್‌ ಲಿಮಿಟೆಡ್‌ ಸಂಸ್ಥೆಯ ವಿರುದ್ಧವೂ ಸಿಬಿಐ ಮೊಕದ್ದಮೆ ದಾಖಲಿಸಿದೆ. ಆದರೆ, ಪ್ರಕರಣದಲ್ಲಿ ಆರೋಪಿ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.

ಸಿಬಿಐ ಪ್ರಕಾರ, ಸ್ವಿಟ್ಜರ್‌ರ್ಲೆಂಡ್ ಮೂಲದ ಸಂಸ್ಥೆಯು ವಿಮಾನ ಪೂರೈಕೆ ಗುತ್ತಿಗೆಗೆ ಪಡೆಯಲು ಅನುಕೂಲವಾಗುವಂತೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಭಂಡಾರಿ ಅವರಿಗೆ ಕಮಿಷನ್ ರೂಪದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಿದೆ.

ಭಂಡಾರಿ ಅವರಿಗೆ ಸೇರಿದ್ದು ಎನ್ನಲಾದ ‘ಆಫ್‌ಸೆಟ್‌ ಇಂಡಿಯಾ ಸಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್’ ಸಂಸ್ಥೆಯು ಸ್ಟ್ಯಾಂಡರ್ಡ್‌ ಚಾರ್ಟರ್ಡ್ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಗೆ 2010ರ ಆಗಸ್ಟ್‌– ಅಕ್ಟೋಬರ್‌ ಅವಧಿಯಲ್ಲಿ ಎರಡು ಕಂತಿನಲ್ಲಿ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿತ್ತು.

2011 ರಿಂದ 2015ರ ಅವಧಿಯಲ್ಲಿ ₹ 350 ಕೋಟಿ ಮೊತ್ತವನ್ನು ದುಬೈ ಮೂಲದ ಆಫ್‌ಸೆಟ್‌ ಇಂಡಿಯಾ ಸಲ್ಯೂಷನ್ಸ್‌ ಎಫ್‌ಝಡ್‌ಸಿ ಸಂಸ್ಥೆಗೆ ಸ್ವಿಟ್ಜರ್‌ರ್ಲೆಂಡ್‌ನ ಕರೆನ್ಸಿ ರೂಪದಲ್ಲಿ ಪಾವತಿಸಲಾಗಿದೆ. ಈ ಕಂಪನಿಯೂ ಭಂಡಾರಿ ಅವರಿಗೆ ಸೇರಿದ್ದು ಎನ್ನಲಾಗಿದೆ.

2010ರ ನವೆಂಬರ್‌ 12 ರಂದು ಪೈಲಟಸ್‌ ಸಂಸ್ಥೆಯು ರಕ್ಷಣಾ ಸಚಿವಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಭಂಡಾರಿ ಅವರ ಜೊತೆಗೆ ಸೇವಾ ಪೂರೈಕೆ ಒಪ್ಪಂದವನ್ನು ಹೊಂದಿರುವ ಕುರಿತ ಅಂಶವನ್ನು ಸಂಸ್ಥೆಯು ಮುಚ್ಚಿಟ್ಟಿತ್ತು ಎಂದು ಸಿಬಿಐ ಆರೋಪಿಸಿದೆ.

ಭಾರತ ಮತ್ತು ದುಬೈನಲ್ಲಿ ಇರುವ ಭಂಡಾರಿ ಮಾಲೀಕತ್ವದ ಕಂಪನಿಗೆ ಹಣ ಪಾವತಿಸಿರುವ ಅಂಶವನ್ನೂ ಪೈಲಟಸ್‌ ಮರೆಮಾಚಿತ್ತು. ‌

ಈ ಕಮಿಷನ್‌ ಅನ್ನು ತರಬೇತಿ ವಿಮಾನ ಪೂರೈಸುವ ಒಡಂಬಡಿಕೆಗಾಗಿ ವಾಯುಪಡೆ, ರಕ್ಷಣಾ ಸಚಿವಾಲಯದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ನೀಡಲಾಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.