ADVERTISEMENT

ವಯನಾಡ್ ಭೂಕುಸಿತದ ಬಗ್ಗೆ ಮೊದಲ ತುರ್ತು ಕರೆ ಮಾಡಿದ್ದ ಮಹಿಳೆಗೆ ಏನಾಯಿತು?

ವಯನಾಡ್ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿದ್ದ ನೀತು ಜೊಜೊ

ಪಿಟಿಐ
Published 5 ಆಗಸ್ಟ್ 2024, 2:59 IST
Last Updated 5 ಆಗಸ್ಟ್ 2024, 2:59 IST
<div class="paragraphs"><p>ನೀತು&nbsp;ಜೊಜೊ</p></div>

ನೀತು ಜೊಜೊ

   

X

ವಯನಾಡ್: ಕೇರಳದ ವಯನಾಡಿನಲ್ಲಿ ಜುಲೈ 30 ರಂದು ಸಂಭವಿಸಿದ ಭೀಕರ ಭೂಕುಸಿತದ ಬಗ್ಗೆ ಮೊದಲ ತುರ್ತು ಕರೆ ಮಾಡಿದ್ದ ಮಹಿಳೆಯೊಬ್ಬರೂ ಅದೇ ಘಟನೆಯಲ್ಲಿ ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ADVERTISEMENT

ವಯನಾಡ್ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿದ್ದ ನೀತು ಜೊಜೊ (40) ಅವರೇ ಭೂಕುಸಿತದಲ್ಲಿ ಮೃತಪಟ್ಟ ನತದೃಷ್ಟ ಮಹಿಳೆ.

ನೀತು ಅವರು ಜು.30ರಂದು ಚೋರಲಾಮಾಲಾದಲ್ಲಿ ಮೊದಲ ಭೂಕುಸಿತ ಸಂಭವಿಸಿದಾಗ ಬೆಳಿಗ್ಗೆ 2 ಗಂಟೆ ಸುಮಾರು ಪೊಲೀಸರಿಗೆ ಚೋರಲಾಮಾಲಾದ ಮನೆಯಿಂದ ತುರ್ತು ಕರೆ ಮಾಡಿದ್ದರು.

‘ಶಾಲೆ ಬಳಿ ನಮ್ಮ ಮನೆ ಇದೆ. ಮನೆಗೆ ಭಾರಿ ಪ್ರಮಾಣದಲ್ಲಿ ನೀರು, ಮಣ್ಣು ನುಗ್ಗುತ್ತಿದೆ. ಐದಾರು ಕುಟುಂಬಗಳು ನಮ್ಮ ಅಕ್ಕ–ಪಕ್ಕ ಇವೆ. ಹೇಗಾದರೂ ಮಾಡಿ ರಕ್ಷಣೆ ಮಾಡಿ’ ಎಂದು ನೀತು ಅವರು ಜೋರಾಗಿ ಮೊಬೈಲ್‌ನಲ್ಲಿ ಮಾತನಾಡಿದ್ದು ತುರ್ತು ಕರೆ ಘಟಕದಲ್ಲಿ ದಾಖಲಾಗಿದೆ.

ನೀತು ಅವರೇ ವಯನಾಡ್ ಭೂಕುಸಿತದ ಬಗ್ಗೆ ಮೊದಲು ಕರೆ ಮಾಡಿ ಮಾಹಿತಿ ನೀಡಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ವಯನಾಡ್‌ನಿಂದ ಅಂಬುಲೆನ್ಸ್ ಚೋರಲಾಮಾಲಾಕ್ಕೆ ತೆರಳುವ ವೇಳೆ ಅದಾಗಲೇ ಭಾರಿ ಮಳೆ, ಎರಡನೇ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿದ್ದರಿಂದ ಸಂಪರ್ಕ ಮಾರ್ಗಗಳು ಕಡಿತಗೊಂಡಿದ್ದವು. ನೀತು ಅವರನ್ನು ರಕ್ಷಣೆ ಮಾಡಲಾಗಲಿಲ್ಲ. ಅವರ ಮೃತದೇಹ ಸಿಕ್ಕಿದೆ. ಘಟನೆಯಲ್ಲಿ ಅವರ ತಾಯಿ ಹಾಗೂ ಮಕ್ಕಳು ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ವಯನಾಡ್‌ ಭೂಕುಸಿತದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 221ಕ್ಕೆ ಏರಿದ್ದು, ಇನ್ನೂ ಸುಮಾರು 180 ಮಂದಿ ನಾಪತ್ತೆ ಯಾಗಿದ್ದಾರೆ.

ಇದುವರೆಗೆ 171 ಶವಗಳ ಗುರುತು ಪತ್ತೆಯಾಗಿದೆ. ಉಳಿದ ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಮೃತರಲ್ಲಿ 37 ಮಕ್ಕಳು, 87 ಮಂದಿ ಮಹಿಳೆಯರು ಸೇರಿದ್ದಾರೆ. ಚಾಲಿಯಾರ್ ನದಿಯಲ್ಲಿ 166 ಅಂಗಾಂಗಗಳು ಸಿಕ್ಕಿವೆ. ಅನಧಿಕೃತವಾಗಿ ಮೃತರ ಸಂಖ್ಯೆ 375 ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.