ADVERTISEMENT

ಜೂಹಿ ಚಾವ್ಲಾ ಚಿತ್ರಗಳ ಗೀತೆ ಹಾಡಿದ ಅಪರಿಚಿತ: ಅರ್ಜಿ ವಿಚಾರಣೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 16:15 IST
Last Updated 2 ಜೂನ್ 2021, 16:15 IST
ಕೋರ್ಟ್‌
ಕೋರ್ಟ್‌   

ನವದೆಹಲಿ: 5ಜಿ ವೈರ್‌ಲೆಸ್‌ ನೆಟ್‌ವರ್ಕ್‌ ವಿರೋಧಿಸಿ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಆನ್‌ಲೈನ್‌ ಮೂಲಕ ಬುಧವಾರ ನಡೆದಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಜೂಹಿ ಅವರು ನಟಿಸಿದ ಚಿತ್ರಗಳ ಗೀತೆಗಳನ್ನು ಹಾಡಿದ್ದರಿಂದ ಅರ್ಜಿ ವಿಚಾರಣೆಗೆ ಮೂರು ಬಾರಿ ಅಡ್ಡಿಯುಂಟಾದ ಘಟನೆ ನಡೆಯಿತು.

ಅರ್ಜಿ ವಿಚಾರಣೆ ಆರಂಭಗೊಂಡ ನಂತರ, ನಟಿ ಜೂಹಿ ಚಾವ್ಲಾ ಅವರು ಆನ್‌ಲೈನ್‌ ಮೂಲಕ ಈ ವಿಚಾರಣೆಗೆ ಸೇರ್ಪಡೆಗೊಂಡರು. ಇದರ ಬೆನ್ನಲ್ಲೇ ಒಬ್ಬ ವ್ಯಕ್ತಿ, 1993ರಲ್ಲಿ ತೆರೆಕಂಡ ‘ಹಮ್‌ ಹೈ ರಾಹಿ ಪ್ಯಾರ್‌ ಕೆ’ ಚಿತ್ರದ ‘ಘೂಂಘಟ್‌ ಕಿ ಆಡ್‌ ಸೆ ದಿಲ್‌ಬರ್‌ ಕಾ’ ಎಂಬ ಗೀತೆಯನ್ನು ಹಾಡಲು ಆರಂಭಿಸಿದರು.

ತಕ್ಷಣ, ನ್ಯಾಯಮೂರ್ತಿ ಜೆ.ಆರ್.ಮಿಧಾ ಅವರು ‘ದಯವಿಟ್ಟು ಮ್ಯೂಟ್‌ ಮಾಡಿ’ ಎಂದು ಸೂಚಿಸಿದರು. ಜೂಹಿ ಚಾವ್ಲಾ ಪರ ವಕೀಲ ದೀಪಕ್‌ ಖೋಸ್ಲಾ ಅವರು, ‘ಪ್ರತಿವಾದಿಗಳ ಪೈಕಿ ಯಾರಾದರೂ ಈ ಹಾಡನ್ನು ಹಾಕಿರಲಿಕ್ಕಿಲ್ಲ ಎಂದು ಭಾವಿಸುವೆ’ ಎಂದು ಹೇಳಿದರು.

ADVERTISEMENT

ವಿಚಾರಣೆ ಮುಂದುವರಿದಾಗ, ಎರಡನೇ ಬಾರಿ ‘ಲಾಲ್‌ ಲಾಲ್‌ ಹೋಂಟೋ ಪೆ..’ ಎಂಬ ಹಾಡು ಕೇಳಿಬಂದರೆ, ಮೂರನೇ ಸಲ ‘ಮೇರಿ ಬನ್ನೋ ಕಿ ಆಯೇಗಿ ಕಿ ಬಾರಾತ್‌’ ಎಂಬ ಹಾಡನ್ನು ಒಬ್ಬ ವ್ಯಕ್ತಿ ಹಾಡಿದ.

ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ‘ಈ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆತನ ವಿರುದ್ಧ ಸೂಕ್ತ ಕ್ರಮಕ್ಕಾಗಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ನ್ಯಾಯಾಲಯದ ಐಟಿ ವಿಭಾಗಕ್ಕೆ ಸೂಚಿಸಿದರು.

ಸ್ವತಃ ಜೂಹಿ ಚಾವ್ಲಾ ಅವರೇ ಅರ್ಜಿ ವಿಚಾರಣೆಗೆ ಸಂಬಂಧಿಸಿದ ವೆಬ್‌ಲಿಂಕ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ವರ್ಚುವಲ್‌ ವಿಚಾರಣೆಗೆ ಹಾಜರಾಗುವಂತೆಯೂ ಅವರು ಜನರನ್ನು ಆಹ್ವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.