ನವದೆಹಲಿ: ಜಮ್ಮು–ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಸೇನಾ ಸಿಬ್ಬಂದಿ, ಲಷ್ಕರ್–ಎ–ತಯಬಾದ ಇಬ್ಬರು ಶಂಕಿತ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದ ಅರಣ್ಯದಲ್ಲಿ ಪಹಲ್ಗಾಮ್ ದಾಳಿಕೋರ ಭಯೋತ್ಪಾದಕರನ್ನು ಬಲಿ ಪಡೆದ ಎರಡು ದಿನಗಳ ಅಂತರದಲ್ಲಿ ಮತ್ತೊಂದು ಎನ್‌ಕೌಂಟರ್ ನಡೆದಿದೆ.
‘ಆಪರೇಷನ್ ಶಿವಶಕ್ತಿ’ ಕಾರ್ಯಾಚರಣೆಯಲ್ಲಿ ರಾತ್ರಿ ವೇಳೆ ಗಡಿ ನುಸುಳಿ ಬರುತ್ತಿದ್ದವರನ್ನು ಹೊಡೆದು ಉರುಳಿಸಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಜಾಗೃತ ಸ್ಥಿತಿಯಲ್ಲಿರುವ ನಮ್ಮ ಪಡೆಗಳು ಕುತಂತ್ರಗಳನ್ನು ಹಿಮ್ಮೆಟ್ಟಿಸುತ್ತಿವೆ. ಶಂಕಿತ ಉಗ್ರರಿಂದ ಮೂರು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ’ ಎಂದು ‘ಎಕ್ಸ್’ನಲ್ಲಿ ‘ಜಮ್ಮು ವೈಟ್ ನೈಟ್ ಕೋರ್’ ಮಾಹಿತಿ ನೀಡಿದೆ.
ಸೇನೆಯ ಸಂಘಟಿತ ಮತ್ತು ಸಮನ್ವಯ ಗುಪ್ತಚರ ಮಾಹಿತಿ ಮತ್ತು ಜಮ್ಮು–ಕಾಶ್ಮೀರ ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ನಡೆದಿದೆ. ಉಗ್ರರು ಗುಂಡಿನ ದಾಳಿ ನಡೆಸಿದರು. ಪ್ರತಿದಾಳಿ ನಡೆಸಿದ ಸೇನೆ ಇಬ್ಬರನ್ನೂ ಹೊಡೆದುರುಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.