ADVERTISEMENT

‘ಆಪರೇಷನ್ ಸಿಂಧೂರ’ ಸಮನ್ವಯತೆಗೆ ಸಾಕ್ಷಿ: ಸಿಡಿಎಸ್‌ ಅನಿಲ್‌ ಚೌಹಾಣ್‌

ಪಿಟಿಐ
Published 10 ಆಗಸ್ಟ್ 2025, 15:16 IST
Last Updated 10 ಆಗಸ್ಟ್ 2025, 15:16 IST
ಅನಿಲ್ ಚೌಹಾಣ್
ಅನಿಲ್ ಚೌಹಾಣ್   

ನವದೆಹಲಿ: ‘ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಭಾರತೀಯ ಸೇನೆಯ ಮೂರು ಪಡೆಗಳ ಸಮನ್ವಯತೆಗೆ ಸಾಕ್ಷಿಯಾಗಿದೆ’ ಎಂದು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಅನಿಲ್‌ ಚೌಹಾಣ್‌ ಭಾನುವಾರ ಹೇಳಿದರು.

ಸಿಕಂದರಾಬಾದ್‌ನಲ್ಲಿರುವ ಕಾಲೇಜ್‌ ಆಫ್‌ ಡಿಫೆನ್ಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಮಾತನಾಡಿದ ಅವರು ‘ಹೊಸದಾಗಿ ಸೃಷ್ಟಿಯಾಗುತ್ತಿರುವ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಸುಧಾರಣೆಗಳನ್ನು ಜಾರಿಗೊಳಿಸಲು ಮೂರು ಪಡೆಗಳು ತಮ್ಮೊಳಗಿನ ಸಮನ್ವಯತೆಯನ್ನು ಮುಂದುವರಿಸುವ ಅವಶ್ಯಕತೆಯಿದೆ’ ಎಂದರು.

ಇಂದಿನ ಆಧುನಿಕ ಯುದ್ಧಕ್ಷೇತ್ರದಲ್ಲಿ ತ್ರಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮಿಲಿಟರಿಯು ಅಳವಡಿಸಿಕೊಳ್ಳುತ್ತಿರುವ ತಂತ್ರಗಾರಿಕೆ ಹಾಗೂ ಬದಲಾವಣೆಗಳನ್ನು ಸಿಡಿಎಸ್‌ ಪ್ರಸ್ತಾಪಿಸಿದರು.

ADVERTISEMENT

ಮೂರು ಸಶಸ್ತ್ರ ಪಡೆಗಳ ಸಾಮರ್ಥ್ಯ ಹಾಗೂ ಸಮನ್ವಯ ವೃದ್ಧಿಗೆ ಸಂಬಂಧಿಸಿದ ಪ್ರಗತಿಯ ಮುನ್ನೋಟದ ಚಿತ್ರಣವನ್ನು ಸೇನಾ ಪಡೆಗಳ ಮುಖ್ಯಸ್ಥರು ಇದೇ ಸಂದರ್ಭ ಬಿಡುಗಡೆ ಮಾಡಿದರು ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ಈ ಮುನ್ನೋಟವು ಸೇನಾಪಡೆಗಳ ಆಧುನೀಕರಣದ ಜೊತೆಗೆ ಕಾರ್ಯಾಚರಣೆಯಲ್ಲಿ ಸಮನ್ವಯ ಹೆಚ್ಚಿಸುವುದು, ದಕ್ಷತೆಯನ್ನು ಸುಧಾರಿಸುವುದು ಮತ್ತು ಯಾವುದೇ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸುವ ಖಾತ್ರಿಯನ್ನು ನೀಡಿದೆ.

ಯುದ್ಧಕ್ಷೇತ್ರದಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಯ ಸಾಮರ್ಥ್ಯವನ್ನು ಒಟ್ಟುಗೂಡಿಸುವುದು ಹಾಗೂ ತಮ್ಮಲ್ಲಿನ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರವು ಮಹತ್ವದ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಕಾರ್ಯೋನ್ಮುಖವಾಗಿರುವ ಹೊತ್ತಿನಲ್ಲಿ ಸೇನಾಪಡೆಗಳ ಮುಖ್ಯಸ್ಥರು ನೀಡಿರುವ ಈ ಹೇಳಿಕೆಯು ಮಹತ್ವ ಪಡೆದಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಪ್ರಕಾರ, ಯುದ್ಧಕ್ಷೇತ್ರದಲ್ಲಿರುವ ಪ್ರತಿಯೊಂದು ಘಟಕವು ಭೂಸೇನೆ, ವಾಯುಪಡೆ, ನೌಕಾಪಡೆಯನ್ನು ಒಳಗೊಂಡಿರಲಿದ್ದು, ನಿರ್ದಿಷ್ಟ ಪ್ರದೇಶವೊಂದರಲ್ಲಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸಲು ಒಂದೇ ಘಟಕವಾಗಿ ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಈ ಮೂರು ಪಡೆಗಳು ಪ್ರತ್ಯೇಕ ಘಟಕಗಳಾಗಿ ಕಾರ್ಯಾಚರಿಸುತ್ತಿವೆ.

ಚೆಸ್‌ ಆಟಕ್ಕೆ ‘ಸಿಂಧೂರ’ ಹೋಲಿಸಿದ ದ್ವಿವೇದಿ:

‘ಆಪರೇಷನ್‌ ಸಿಂಧೂರ ಕಾರ್ಯಾಚರಣೆಯು ಚೆಸ್‌ ಆಟದಂತಿತ್ತು’ ಎಂದು ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಐಐಟಿ ಮದ್ರಾಸ್‌ನಲ್ಲಿ ಆ.4ರಂದು ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಶತ್ರುಗಳ ಮುಂದಿನ ನಡೆ ಏನು ಎಂಬುದು ನಮಗೆ ತಿಳಿದಿರಲಿಲ್ಲ’ ಎಂದಿದ್ದಾರೆ. ‘ಆದರೆ ನಾಲ್ಕನೇ ದಿನವೇ ಟೆಸ್ಟ್‌ ಪಂದ್ಯ ಮುಗಿಯಿತು’ ಎಂದು ಹೇಳಿದ್ದಾರೆ. ‘ಸೋತಿದ್ದೀರಾ ಅಥವಾ ಗೆದ್ದಿದ್ದೀರಾ ಎಂದು ನೀವು ಪಾಕಿಸ್ತಾನೀಯರನ್ನು ಕೇಳಿದರೆ ಅವರು ನಮ್ಮ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಆಗಿದ್ದಾರೆ. ನಾವು ಮಾತ್ರ ಗೆದ್ದಿರಬೇಕು. ಅದಕ್ಕಾಗಿಯೇ ಅವರು ಫೀಲ್ಡ್‌ ಮಾರ್ಷಲ್‌ ಆಗಿದ್ದಾರೆ’ ಎಂದು ಹೇಳುತ್ತಾರೆ’ ಎಂದರು. ಸೇನಾ ಮುಖ್ಯಸ್ಥರ ಭಾಷಣದ ಈ ವಿಡಿಯೊವನ್ನು ಸೇನೆಯು ವಾರಾಂತ್ಯದಲ್ಲಿ ಹಂಚಿಕೊಂಡಿದೆ. ‘ಮುಂದಿನ ಬಾರಿ ಈಗ ನಡೆದ ಅನಾಹುತಕ್ಕಿಂತಲೂ ಹೆಚ್ಚಿನ ದುರ್ಘಟನೆ ಸಂಭವಿಸಬಹುದು. ಶತ್ರು ದೇಶವು ಅದನ್ನು ಏಕಾಂಗಿಯಾಗಿ ಮಾಡುತ್ತದೆಯೋ ಅಥವಾ ಬೇರೆ ದೇಶದ ಬೆಂಬಲವನ್ನು ಪಡೆಯುತ್ತದೆಯೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ಈ ಬಗ್ಗೆ ನಮಗೆ ಬಲವಾದ ಸುಳಿವು ಸಿಕ್ಕಿದೆ. ಆ ದೇಶವು ಏಕಾಂಗಿಯಾಗಿರುವುದಿಲ್ಲ ಎಂಬುದು ನಮ್ಮ ಭಾವನೆ. ಆದ್ದರಿಂದ ನಾವು ಸದಾ ಜಾಗರೂಕರಾಗಿರಬೇಕು’ ಎಂದು ಯಾವುದೇ ದೇಶದ ಹೆಸರು ಪ್ರಸ್ತಾಪಿಸದೆ ಸೇನಾ ಮುಖ್ಯಸ್ಥರು ತಿಳಿಸಿದರು. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಕುರಿತಂತೆ ಚೆಸ್‌ ಹಾಗೂ ಕ್ರಿಕೆಟ್‌ ಆಟವನ್ನು ದ್ವಿವೇದಿ ಉದಾಹರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.