ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
ಪಿಟಿಐ ಚಿತ್ರ
ದ್ರಾಸ್ (ಕಾರ್ಗಿಲ್): ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ‘ಆಪರೇಷನ್ ಸಿಂಧೂರ’ ಮೂಲಕ ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಹೇಳಿದ್ದಾರೆ.
ಇಲ್ಲಿನ ಕಾರ್ಗಿಲ್ ಯುದ್ದ ಸ್ಮಾರಕದ ಬಳಿ ‘ಕಾರ್ಗಿಲ್ ವಿಜಯ ದಿವಸ್’ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರವು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿತ್ತು ಹಾಗೂ ಪಾಕಿಸ್ತಾನಕ್ಕೆ ನೀಡಿದ ಸ್ಪಷ್ಟ ಸಂದೇಶವಾಗಿದೆ’ ಎಂದಿದ್ದಾರೆ.
‘ಪಹಲ್ಗಾಮ್ ದಾಳಿ ಇಡೀ ದೇಶಕ್ಕೆ ಆಘಾತ ಉಂಟುಮಾಡಿದೆ. ಆದರೆ ಈ ಬಾರಿ ಭಾರತವು ಕೇವಲ ಶೋಕ ವ್ಯಕ್ತಪಡಿಸುತ್ತಾ ಕೂರಲಿಲ್ಲ. ತಕ್ಕ ಪ್ರತಿಕ್ರಿಯೆ ನೀಡಿತಲ್ಲದೆ, ತಾನು ನೀಡುವ ತಿರುಗೇಟು ನಿರ್ಣಾಯಕವಾಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ’ ಎಂದು ತಿಳಿಸಿದ್ದಾರೆ.
ದೇಶದ ಜನರು ತೋರಿದ ನಂಬಿಕೆ ಮತ್ತು ಸರ್ಕಾರವು ನೀಡಿದ ಮುಕ್ತ ಅಧಿಕಾರದಿಂದ ತಕ್ಕ ಪ್ರತ್ಯುತ್ತರ ನೀಡಲು ಸೇನೆಗೆ ಸಾಧ್ಯವಾಯಿತು. ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಅಥವಾ ಜನರಿಗೆ ಹಾನಿ ಮಾಡುವ ಯಾವುದೇ ಶಕ್ತಿಗೆ ತಕ್ಕ ಉತ್ತರವನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಆಪರೇಷನ್ ಸಿಂಧೂರ ಸಮಯದಲ್ಲಿ, ಸೇನೆಯು ಪಾಕಿಸ್ತಾನದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳನ್ನು ನಿರ್ಮೂಲನೆ ಮಾಡಿದೆ. ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸುವ ಮೂಲಕ ನಿರ್ಣಾಯಕ ಗೆಲುವು ಸಾಧಿಸಿತು. ಪಾಕ್ ತೋರಿದ ಪ್ರತಿರೋಧವನ್ನು ಸಮರ್ಥವಾಗಿ ಎದುರಿಸಿತು ಎಂದಿದ್ದಾರೆ.
ಸೇನೆಗೆ ‘ರುದ್ರ’ ತುಕಡಿ ಬಲ
‘ಸೇನೆಗೆ ಬಲ ತುಂಬಲು ‘ರುದ್ರ’ ಹೆಸರಿನ ತುಕಡಿಯನ್ನು ನಿಯೋಜಿಸಲು ಶುಕ್ರವಾರ ಅನುಮೋದನೆ ನೀಡಿದ್ದೇನೆ’ ಎಂದು ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದರು.
ಈ ಮೂಲಕ ಕಾಲಾಳು ಪಡೆ ಶಸ್ತ್ರಸಜ್ಜಿತ ಘಟಕ ಫಿರಂಗಿ ದಳ ವಿಶೇಷ ಪಡೆ ಮತ್ತು ಮಾನವರಹಿತ ವೈಮಾನಿಕ ವಾಹನವನ್ನು ಒಂದೇ ಸ್ಥಳದಲ್ಲಿ ಹೊಂದುವ ಅವಕಾಶ ಲಭಿಸಿದೆ. ಯುದ್ಧದ ಸಮಯದಲ್ಲಿ ಮುಂಚೂಣಿಯ ಹೋರಾಟಗಾರರಿಗೆ ಈ ತುಕಡಿ ನೆರವಾಗಲಿದೆ ಎಂದರು.
ಗಡಿಯಲ್ಲಿ ವಿರೋಧಿಗಳ ದಾಳಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರುವ ವಿಶೇಷ ‘ಭೈರವ್ ಲೈಟ್ ಕಮಾಂಡೊ’ ಘಟಕವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಪದಾತಿ ದಳವು ಈಗ ಡ್ರೋನ್ ತುಕಡಿಯನ್ನು ಹೊಂದಿದೆ. ಫಿರಂಗಿ ದಳದಲ್ಲಿ ಶಕ್ತಿಬಾನ್ ರೆಜಿಮೆಂಟ್‌ಅನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಡ್ರೋನ್ ಮತ್ತು ಡ್ರೋನ್ ಧ್ವಂಸಕ ವ್ಯವಸ್ಥೆ ಅಳವಡಿಸಲಾಗಿದೆ ಎಂದು ವಿವರಿಸಿದರು.
‘ದೇಶವಾಸಿಗಳು ತೋರಿಸಿದ ನಂಬಿಕೆ ಮತ್ತು ಸರ್ಕಾರ ನೀಡಿದ ಮುಕ್ತ ಹಸ್ತದಿಂದ, ಭಾರತೀಯ ಸೇನೆಯು ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಿತು. ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸಲು ಅಥವಾ ಜನರಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾವುದೇ ಶಕ್ತಿಗೆ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ಇದು ಭಾರತದ ಹೊಸ ಶೈಲಿ’ ಎಂದು ಅವರು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಗುರಿಯಾಗಿಸುವ ಮೂಲಕ ಭಾರತ ನಿರ್ಣಾಯಕ ಗೆಲುವು ಸಾಧಿಸಿತು. ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರ್ಣಾಯಕ ವಿಜಯ ಸಾಧಿಸಲು ಸೇನೆಯು ಪಾಕಿಸ್ತಾನದ ಇತರ ಆಕ್ರಮಣಕಾರಿ ನಡೆಗಳನ್ನು ವಿಫಲಗೊಳಿಸಿತು’ ಎಂದು ಅವರು ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.