ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ: ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಾರತ ಸೇಡು ತೀರಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೀಪಾವಳಿ ಹಬ್ಬದಂದು ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಪತ್ರ ಬರೆದಿದ್ದಾರೆ.
ಆಪರೇಷನ್ ಸಿಂಧೂರ ಹಾಗೂ ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಿದ್ದು, ಜಗತ್ತು ಬಿಕ್ಕಟ್ಟುಗಳಿಂದ ನಲುಗುತ್ತಿರುವ ವೇಳೆ ಭಾರತವು ಸ್ಥಿರತೆಯ ಸಂಕೇತವಾಗಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಜಿಎಸ್‌ಟಿ ದರ ಕಡಿಮೆ ಮಾಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದ್ದು, ಐತಿಹಾಸಿಕ ಸಾಧನೆಗಳಲ್ಲಿ ಒಂದು ಎಂದಿದ್ದಾರೆ.
'ಏಕ ಭಾರತ, ಶ್ರೇಷ್ಠ ಭಾರತ' ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲು, ಎಲ್ಲಾ ಭಾಷೆಗಳನ್ನು ಗೌರವಿಸಲು, ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನಾಗರಿಕರಿಗೆ ಮೋದಿ ಒತ್ತಾಯಿಸಿದ್ದಾರೆ.
'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದವಾದ ಬಳಿಕ ಇದು ಎರಡನೇ ದೀಪಾವಳಿ, ಭಗವಾನ್ ಶ್ರೀರಾಮನು ನಮಗೆ ಸದಾಚಾರವನ್ನು ಎತ್ತಿಹಿಡಿಯಲು ಕಲಿಸುತ್ತಾನೆ. ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯವನ್ನು ನೀಡುತ್ತಾನೆ. ಇದಕ್ಕೆ ಕೆಲವು ತಿಂಗಳ ಹಿಂದೆ ನಡೆದ ಆಪರೇಷನ್ ಸಿಂಧೂರವೇ ಸಾಕ್ಷಿ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಸದಾಚಾರವನ್ನು ಎತ್ತಿಹಿಡಿದಿದ್ದು ಮಾತ್ರವಲ್ಲವೇ ಅನ್ಯಾಯದ ಸೇಡನ್ನೂ ತೀರಿಸಿಕೊಂಡಿದೆ' ಎಂದು ಮೋದಿ ತಿಳಿಸಿದ್ದಾರೆ.
ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆ ತೊರೆದು ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟು, ಹಿಂಸಾಚಾರದ ಮಾರ್ಗವನ್ನು ತ್ಯಜಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿರುವುದು ರಾಷ್ಟ್ರಕ್ಕೆ ಒಂದು ಪ್ರಮುಖ ಸಾಧನೆಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.