ADVERTISEMENT

ಭಾರತ 'ಕಳೆದುಕೊಂಡ' ವಿಮಾನಗಳೆಷ್ಟು?: ಜೈಶಂಕರ್‌ಗೆ ರಾಹುಲ್ ಪ್ರಶ್ನೆ

ಪಿಟಿಐ
Published 19 ಮೇ 2025, 11:22 IST
Last Updated 19 ಮೇ 2025, 11:22 IST
   

ನವದೆಹಲಿ: ‘ಆಪರೇಷನ್ ಸಿಂಧೂರ’ದ ಬಗ್ಗೆ ಪಾಕಿಸ್ತಾನಕ್ಕೆ ‘ಆರಂಭಿಕ’ ಮಾಹಿತಿ ನೀಡಲಾಗಿತ್ತೆಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಮ್ಮೆ  ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ವಿಷಯದ ಬಗ್ಗೆ ದನಿ ಎತ್ತಿದ ಎರಡು ದಿನಗಳ ನಂತರ ಮತ್ತೊಮ್ಮೆ ರಾಹುಲ್‌, ಜೈಶಂಕರ್ ಅವರ ಹೇಳಿಕೆಯ ವಿಡಿಯೊವೊಂದನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ‘ಇದೊಂದು ಅಪರಾಧ. ಇದರಿಂದ ಭಾರತೀಯ ಸೇನೆಯು ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ದೇಶಕ್ಕೆ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಈ ಹೇಳಿಕೆಯನ್ನು ಕಳೆದ ಶನಿವಾರ ಅಲ್ಲಗಳೆದು, ‘ಸತ್ಯ ತಿರುಚಲಾಗಿದೆ’ ಎಂದೂ ಸ್ಪಷ್ಟನೆ ನೀಡಿತ್ತು. ಆದರೆ, ಕಾಂಗ್ರೆಸ್‌ ಪಕ್ಷವು ಜೈಶಂಕರ್ ಅವರ ಹೇಳಿಕೆಯನ್ನು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪಾಕಿಸ್ತಾನದ ಆಗಿನ ಅಧ್ಯಕ್ಷ ಜನರಲ್ ಜಿಯಾ-ಉಲ್-ಹಕ್ ಅವರೊಂದಿಗೆ ನಡೆಸಿದ್ದ ಮಾತುಕತೆಗೆ ಹೋಲಿಸಿದೆ.

ADVERTISEMENT

‘ಆಪರೇಷನ್‌ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ತಿಳಿಸಿದ್ದರಿಂದ ನಾವು ಈ ಕಾರ್ಯಾಚರಣೆ ವೇಳೆ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು ಎನ್ನುವುದನ್ನು ರಾಷ್ಟ್ರಕ್ಕೆ ತಿಳಿಸಬೇಕು. ಈ ವಿಚಾರದಲ್ಲಿ ಸಚಿವ ಜೈಶಂಕರ್‌ ಮೌನ ವಹಿಸಿದ್ದಾರೆ. ಅವರು ಬಾಯಿ ಬಿಡುತ್ತಿಲ್ಲ. ಇದೊಂದು ಲೋಪವಲ್ಲ, ಇದೊಂದು ಅಪರಾಧ. ದೇಶಕ್ಕೆ ಸತ್ಯ ತಿಳಿಸಬೇಕೆಂದು ನಾನು ಮತ್ತೊಮ್ಮೆ ಒತ್ತಾಯಿಸುತ್ತಿದ್ದೇನೆ’ ಎಂದು ರಾಹುಲ್‌ ಹೇಳಿದ್ದಾರೆ.

‘ಜೈಶಂಕರ್ ಅವರ ಹೇಳಿಕೆಯ ನಂತರ, ನಮ್ಮನ್ನು ಪಾಕಿಸ್ತಾನವು ಸೇರಿ ಇಡೀ ಜಗತ್ತಿನಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ನೀವು ಪಾಕಿಸ್ತಾನಕ್ಕೆ ನೀಡಿದ ಈ ಮುನ್ನೆಚ್ಚರಿಕೆಯಿಂದ ದೇಶಕ್ಕೆ ಆಗಿರುವ ಹಾನಿಯ ಬಗ್ಗೆ ನೀವು ಉತ್ತರಿಸಬೇಕೆಂದು ರಾಹುಲ್ ಗಾಂಧಿ ಪದೇ ಪದೇ ಒತ್ತಾಯಿಸುತ್ತಿದ್ದಾರೆ. ದೇಶದ ಎಷ್ಟು ಯುದ್ಧ ವಿಮಾನಗಳು ಪತನಗೊಂಡಿವೆ, ದೇಶಕ್ಕೆ ಎಷ್ಟು ಹಾನಿಯಾಗಿದೆ ಮತ್ತು ಎಷ್ಟು ಭಯೋತ್ಪಾದಕರು ತಪ್ಪಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯುವುದು ನಮಗೆ ಬಹಳ ಮುಖ್ಯವಾಗಿದೆ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಹೇಳಿದ್ದಾರೆ. 

ರಾಹುಲ್ ಆರೋಪ ತಿರಸ್ಕರಿಸಿದ ಸಚಿವಾಲಯ

ರಾಹುಲ್ ಗಾಂಧಿ ಅವರ ಆರೋಪವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ. ಅವರ ಹೇಳಿಕೆ ಸತ್ಯದ ತಪ್ಪು ನಿರೂಪಣೆ ಎಂದು ಕರೆದಿದೆ. ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತೇ ಹೊರತು, ಮುಂಚಿತವಾಗಿ ನೀಡಿದ ಎಚ್ಚರಿಕೆಯದಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಜೈಶಂಕರ್ ಹೇಳಿಕೆಗಳು ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ‘ರಾ’ ಪತ್ತೆಹಚ್ಚಿದ ಕುರಿತು ಪಾಕ್‌ನ ಆಗಿನ ಅಧ್ಯಕ್ಷ ಜಿಯಾ-ಉಲ್-ಹಕ್‌ಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ತಿಳಿಸಿದ್ದಕ್ಕಿಂತ ಕಡಿಮೆ ಪಾಪವೇನಲ್ಲ  
ಪವನ್ ಖೇರಾ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.