ADVERTISEMENT

ತಮ್ಮ ವಿರುದ್ಧದ ದೂರುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ: SC

ಪಿಟಿಐ
Published 28 ಮೇ 2025, 9:42 IST
Last Updated 28 ಮೇ 2025, 9:42 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ತಕರಾರು ಇಲ್ಲ. ಆದರೆ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳುವಂತಿಲ್ಲ ಎಂದು ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್‌ ಮೊಹಮದಾಬಾದ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಭಯೋತ್ಪಾದಕರು ಮತ್ತು ಅವರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ 'ಆಪರೇಷನ್‌ ಸಿಂಧೂರ'ಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದ ಆರೋಪ ಅಲಿ ಅವರ ಮೇಲಿದೆ.

ಅಲಿ ಅವರಿಗೆ ಮಧ್ಯಂತರ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳಿಗೆ ಮಾರ್ಪಾಡು ಮಾಡಲು ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ದೀಪಂಕರ್‌ ದತ್ತಾ ಅವರಿದ್ದ ಪೀಠ ನಿರಾಕರಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಹಂಚಿಕೊಂಡಿರುವ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ, ಆ ವಿಚಾರವಾಗಿ ಯಾವುದೇ ಪೋಸ್ಟ್‌, ಬರಹ ಅಥವಾ ಭಾಷಣವನ್ನು ಹಂಚಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಪುನರುಚ್ಛರಿಸಿದೆ.

ADVERTISEMENT

ಅಷ್ಟೇ ಅಲ್ಲದೆ, ಭಾರತದ ನೆಲದಲ್ಲಿ ನಡೆದ ಉಗ್ರರ ದಾಳಿ ಹಾಗೂ ಅದಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಪ್ರತಿ ದಾಳಿ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದಂತೆಯೂ ಎಚ್ಚರಿಸಿದೆ.

ಅಲಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನನು ಅವಧಿಯನ್ನು ವಿಸ್ತರಿಸುತ್ತಿರುವುದಾಗಿಯೂ ಹೇಳಿರುವ ಕೋರ್ಟ್‌, ಮುಂದಿನ ವಿಚಾರಣಾ ದಿನಾಂಕದ ವೇಳೆಗೆ ತನಿಖೆ ಪೂರ್ಣಗೊಳಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿದೆ.

'ಕರ್ನಲ್‌ ಸೋಫಿಯಾ ಅವರನ್ನು ಶ್ಲಾಘಿಸುವ ಬಲಪಂಥೀಯರು, ಗುಂ‍ಪು ಹಲ್ಲೆಗಳು ಹಾಗೂ ಬುಲ್ಡೋಜರ್‌ ಕ್ರಮದ ಸಂತ್ರಸ್ತರಿಗೆ ರಕ್ಷಣೆ ನೀಡುವಂತೆಯೂ ಒತ್ತಾಯಿಸಬೇಕು' ಎಂದು ಖಾನ್‌ ಅವರು ಮೇ 7ರಂದು ಪೋಸ್ಟ್ ಮಾಡಿದ್ದರು. ಈ ಕುರಿತು ಎರಡು ಎಫ್‌ಐಆರ್‌ ದಾಖಲಾಗಿವೆ. ಅದರಂತೆ ಅವರನ್ನು ಮೇ 18ರಂದು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.