ADVERTISEMENT

Operation Sindoor | ಭಾರತದ ದಾಳಿಯಿಂದ ಹಾನಿಯಾಗಿದೆ: ಪಾಕ್ ಪ್ರಧಾನಿ ಷರೀಫ್‌

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:28 IST
Last Updated 17 ಮೇ 2025, 15:28 IST
ಶೆಹಬಾಜ್‌ ಷರೀಫ್
ಶೆಹಬಾಜ್‌ ಷರೀಫ್   

ನವದೆಹಲಿ: ಭಾರತವು ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಿರುವುದನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇದೇ ಮೊದಲ ಬಾರಿ ಒಪ್ಪಿಕೊಂಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಷರೀಫ್, ಸೇನೆಯ ಮುಖ್ಯಸ್ಥ ಜನರಲ್‌ ಸೈಯದ್‌ ಆಸಿಮ್‌ ಮುನೀರ್‌ ಅವರು ಭಾರತದ ದಾಳಿ ಬಗ್ಗೆ ತಮಗೆ ಮಾಹಿತಿ ನೀಡಿರುವುದರ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

‘ಮೇ 9 ಮತ್ತು 10ರ ಮಧ್ಯರಾತ್ರಿ 2.30ಕ್ಕೆ ಆಸಿಮ್ ಮುನೀರ್ ಅವರು ನನಗೆ ಕರೆ ಮಾಡಿ ಭಾರತವು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿರುವ ಮಾಹಿತಿ ನೀಡಿದರು. ಒಂದು ಕ್ಷಿಪಣಿ ನೂರ್ ಖಾನ್ ವಾಯುನೆಲೆಗೆ ಅಪ್ಪಳಿಸಿದೆ ಮತ್ತು ಇತರ ಕ್ಷಿಪಣಿಗಳು ಬೇರೆ ಪ್ರದೇಶಗಳನ್ನು ಹಾನಿಗೊಳಿಸಿರುವುದಾಗಿ ತಿಳಿಸಿದರು’ ಎಂದು ಷರೀಫ್‌ ಅವರು ಭಾಷಣದಲ್ಲಿ ಹೇಳಿರುವುದಾಗಿ ‘ಎಎನ್‌ಐ’ ಶನಿವಾರ ವರದಿ ಮಾಡಿದೆ. 

ADVERTISEMENT

ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ ಮಧ್ಯೆ ಇರುವ ನೂರ್‌ ಖಾನ್‌ ವಾಯುನೆಲೆ ಪಾಕಿಸ್ತಾನದ ಪ್ರಮುಖ ಯುದ್ಧತಂತ್ರ ಸೌಲಭ್ಯಗಳಲ್ಲಿ ಒಂದು ಎನಿಸಿಕೊಂಡಿದೆ. 

‘ಭಾರತವು ನೂರ್ ಖಾನ್ ವಾಯುನೆಲೆ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿಳಿಸಲು ಜನರಲ್ ಆಸಿಮ್ ಮುನೀರ್ ಮಧ್ಯರಾತ್ರಿ ಕರೆ ಮಾಡಿರುವುದನ್ನು ಶೆಹಬಾಜ್ ಷರೀಫ್ ಸ್ವತಃ ಒಪ್ಪಿಕೊಂಡಿದ್ದಾರೆ. ಭಾರತದ ದಾಳಿಯ ಸುದ್ದಿ ತಿಳಿದು ಪಾಕಿಸ್ತಾನದ ಪ್ರಧಾನಿ ಮಧ್ಯರಾತ್ರಿ ಎಚ್ಚರಗೊಂಡಿದ್ದಾರೆ. ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯ ಪ್ರಮಾಣ ಮತ್ತು ನಿಖರತೆಯನ್ನು ಅದು ಹೇಳುತ್ತದೆ’ ಎಂದು ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪಾಕ್‌ ಪ್ರಧಾನಿ ಭಾಷಣದ ವಿಡಿಯೊ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.

ಪಹಲ್ಗಾಮ್‌ ದಾಳಿಗೆ ಪ್ರತ್ಯುತ್ತರವಾಗಿ ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಮೇ 7ರಂದು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಆ ಬಳಿಕ ಉಭಯ ದೇಶಗಳ ನಡುವೆ ಸೇನಾ ಸಂಘರ್ಷ ಏರ್ಪಟ್ಟಿತ್ತು. ಪಾಕಿಸ್ತಾನದ ಡ್ರೋನ್‌ ದಾಳಿಗೆ ಪ್ರತಿಯಾಗಿ ಭಾರತದ ಸೇನೆ ಆ ದೇಶದ ಸೇನಾನೆಲೆಗಳನ್ನು ಗುರಿಯಾಗಿಸಿ ತಿರುಗೇಟು ನೀಡಿತ್ತು. 

‘ಆಪರೇಷನ್‌ ಸಿಂಧೂರ’ ಕಾರ್ಯಾಚಣೆಯಲ್ಲಿ ಭಾರತವು ‘ಬ್ರಹ್ಮೋಸ್‌’ ಸೂಪರ್‌ಸಾನಿಕ್‌ ಕ್ಷಿಪಣಿ ಬಳಸಿರುವುದರನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಶುಕ್ರವಾರ ದೃಢಪಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.