ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಕೈಗೊಂಡು ಪಾಕಿಸ್ತಾನದ ಉಗ್ರರ 9 ನೆಲೆಗಳ ಮೇಲೆ ದಾಳಿ ನಡೆಸಿದೆ.
ಪಾಕಿಸ್ತಾನದ ಉಗ್ರರ ಮೇಲಿನ ದಾಳಿಗೆ ಆಪರೇಷನ್ ಸಿಂಧೂರ ಎನ್ನುವ ಹೆಸರು ಆಯ್ಕೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರು ಎಂದು ಸರ್ಕಾರ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಹಿಂದೂ ಮಹಿಳೆಯರು ಮದುವೆಯಾದ ಬಳಿಕ ಸುಮಂಗಲಿಯ ಸಂಕೇತವಾಗಿ ಹಣೆಯ ಮೇಲೆ ಸಿಂಧೂರ (ಕೆಂಪು ಕಂಕುಮ)ವನ್ನು ಇಟ್ಟುಕೊಳ್ಳುತ್ತಾರೆ. ಪಹಲ್ಗಾಮ್‌ನಲ್ಲಿ ಉಗ್ರರು ಗುಂಡು ಹಾರಿಸುವ ಮೊದಲು ಹೆಸರು, ಧರ್ಮವನ್ನು ಕೇಳಿದ್ದಾರೆ. ಹಿಂದೂ ಎಂದ ತಕ್ಷಣ ಗುಂಡು ಹಾರಿಸಿದ್ದಾರೆ ಎಂದು ಮೃತರ ಸಂಬಂಧಿಗಳು ಹೇಳಿದ್ದರು.
ಇದಕ್ಕೆ ಅನುಸಾರವಾಗಿ ಭಾರತೀಯ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರ ‘ಆಪರೇಷನ್ ಸಿಂಧೂರ’ ಎಂದು ಕಾರ್ಯಾಚರಣೆಗೆ ನಾಮಕರಣ ಮಾಡಿದೆ ಎಂದು ಹಲವು ವರದಿಗಳು ತಿಳಿಸಿವೆ.
ಅಲ್ಲದೆ ಭಾರತೀಯ ಸೇನೆ ಬಿಡುಗಡೆ ಮಾಡಿದ ಲೋಗೋದಲ್ಲಿಯೂ ಆಪರೇಷನ್ ಸಿಂಧೂರ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಜತೆಗೆ ಸಿಂಧೂರ ಪದದ ನಡುವೆ ಬಟ್ಟಲಿನಲ್ಲಿರುವ ಕುಂಕುಮ ಸಿಡಿದಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಎಕ್ಸ್‌ನಲ್ಲಿ ಲೊಗೊದ ಜತೆಗ ‘ನ್ಯಾಯ ದೊರಕಿತು, ಜೈ ಹಿಂದ್’ ಎಂದು ಭಾರತೀಯ ಸೇನೆ ಕ್ಯಾಪ್ಶನ್ ನೀಡಿದೆ.
ಪಹಲ್ಗಾಮ್‌ನಲ್ಲಿ ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡ ಹೆಣ್ಣುಮಕ್ಕಳ ದುಃಖವನ್ನು ಸೂಚ್ಯವಾಗಿ ತೋರಿಸಲಾಗಿದೆ ಎಂದು ಲೋಗೊ ಕುರಿತು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.