ADVERTISEMENT

ಆ‍ಪರೇಷನ್‌ ಸಿಂಧೂರ: ಭಯೋತ್ಪಾದನೆಯ ಅಂತ್ಯದ ಆರಂಭ ಎಂದ ನರ್ವಾಲ್‌ ಪತ್ನಿ ಹಿಮಾಂಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2025, 11:06 IST
Last Updated 7 ಮೇ 2025, 11:06 IST
<div class="paragraphs"><p>ಹಿಮಾಂಶಿ ನರ್ವಾಲ್‌</p></div>

ಹಿಮಾಂಶಿ ನರ್ವಾಲ್‌

   

ಚಂಡೀಗಢ: ‘ಇದು ಭಯೋತ್ಪಾದನೆಯ ಅಂತ್ಯದ ಆರಂಭ...’ ಹೀಗೆಂದವರು ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಬಲಿಯಾದ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಅವರ ಪತ್ನಿ ಹಿಮಾಂಶಿ ನರ್ವಾಲ್‌.

‘ಆಪರೇಷನ್‌ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ 9 ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಮಂಗಳವಾರ ತಡರಾತ್ರಿ ನಡೆಸಿದ ಪ್ರತೀಕಾರದ ದಾಳಿಗೆ ಹಿಮಾಂಶಿ ಅವರು ಸರ್ಕಾರ ಮತ್ತು ಸೇನೆಗೆ ಕೃತಜ್ಞತೆ ತಿಳಿಸಿದರು.

ADVERTISEMENT

‘ನನ್ನ ಪತಿ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ದ್ವೇಷ ಮತ್ತು ಭಯೋತ್ಪಾದನೆಯನ್ನು ತೊಲಗಿಸಿ ದೇಶದಲ್ಲಿ ಶಾಶ್ವತ ಶಾಂತಿ ನೆಲಸಬೇಕು ಎಂದು ಅವರು ಬಯಸಿದ್ದರು’ ಎಂದು ಸುದ್ದಿಸಂಸ್ಥೆ ಪಿಟಿಐಗೆ ಹಿಮಾಂಶಿ ನರ್ವಾಲ್ ಹೇಳಿದರು.

‘ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಂಡ ಸರ್ಕಾರಕ್ಕೆ ಮತ್ತು ಸೇನೆಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ಇದು ಇಲ್ಲಿಗೆ ಕೊನೆಗೊಳ್ಳಬಾರದು. ದೇಶದಲ್ಲಿ ಇದು ಭಯೋತ್ಪಾದನೆಯ ಅಂತ್ಯದ ಆರಂಭವಾಗಬೇಕು’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ವಿನಯ್‌ ನರ್ವಾಲ್‌ ತಂದೆ ರಾಜೇಶ್‌ ಅವರು, ‘ಭಯೋತ್ಪಾದಕರಿಗೆ ಭಾರತ ಉತ್ತಮ ಸಂದೇಶವನ್ನು ರವಾನಿಸಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ನಡೆಸುವ ಮುನ್ನ ಭಯೋತ್ಪಾದಕರು 100 ಬಾರಿ ಯೋಚಿಸುವಂತೆ ನಮ್ಮ ಸೇನೆ ಮಾಡಿದೆ’ ಎಂದು ಹೇಳಿದರು.

‘ಇಂತಹ ಹೇಡಿತನದ ಕೃತ್ಯವನ್ನು ಮತ್ತೆ ಯಾರೂ ಮಾಡಲು ಧೈರ್ಯ ಮಾಡದಂತೆ ಪ್ರತೀಕಾರದ ದಾಳಿ ನಡೆಸಬೇಕು ಎಂದು ನಾನು ಹೇಳಿದ್ದೆ. ಅದರಂತೆ ಸರ್ಕಾರ ಮತ್ತು ಸೇನೆಯ ಮೇಲೆ ವಿಶ್ವಾಸವಿಟ್ಟಿದ್ದೆ’ ಎಂದರು.

‘ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಸೂಕ್ತ ಉತ್ತರ ನೀಡಬೇಕೆಂದು ನಾನು ನಮ್ಮ ಸೈನ್ಯಕ್ಕೆ ಹೇಳಲು ಬಯಸುತ್ತೇನೆ’ ಎಂದು ನರ್ವಾಲ್‌ ಅವರ ತಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.