ADVERTISEMENT

ಸೇನೆಯ ಅಸಾಧಾರಣ ಶಕ್ತಿಯ ಸಂಕೇತ ‘ಆಪರೇಷನ್‌ ಸಿಂಧೂರ’

ಪಿಟಿಐ
Published 16 ಮೇ 2025, 11:49 IST
Last Updated 16 ಮೇ 2025, 11:49 IST
ಅಮಿತ್‌ ಶಾ 
ಅಮಿತ್‌ ಶಾ    

ನವದೆಹಲಿ: ಆಪರೇಷನ್ ಸಿಂಧೂರವು ಪ್ರಧಾನಿ ನರೇಂದ್ರ ಮೋದಿಯವರ ದೃಢವಾದ ರಾಜಕೀಯ ಇಚ್ಛಾಶಕ್ತಿ, ವಿವಿಧ ಏಜೆನ್ಸಿಗಳಿಂದ ನಿಖರವಾದ ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ದೇಶದ ಮೂರು ಸಶಸ್ತ್ರ ಪಡೆಗಳ ಸಾಟಿಯಿಲ್ಲದ ದಾಳಿಯ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಣ್ಣಿಸಿದ್ದಾರೆ.

ವಿವಿಧ ಏಜೆನ್ಸಿಗಳ ನಡುವೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ದೆಹಲಿಯಲ್ಲಿ ಉನ್ನತೀಕರಿಸಿದ ಬಹು ಏಜೆನ್ಸಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

26/11ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಗುಪ್ತಚರ ಇಲಾಖೆಯು ವಿವಿಧ ಏಜೆನ್ಸಿಗಳಿಂದ ಸಮಯೋಚಿತವಾದ ಮಾಹಿತಿಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಬಹು ಏಜೆನ್ಸಿ ಕೇಂದ್ರವನ್ನು ಸ್ಥಾಪಿಸಿದೆ.

ADVERTISEMENT

‘ಪಹಲ್ಗಾಮ್‌ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಪ್ರಧಾನಿ ಮೋದಿಯವರು ತೋರಿದ ದೃಢ ನಿಶ್ಚಯ, ಗುಪ್ತಚರ ಇಲಾಖೆ ವಿವಿಧ ಸಂಸ್ಥೆಗಳಿಂದ ಸಂಗ್ರಹಿಸಿದ ಖಚಿತ ಮಾಹಿತಿ ಆಧರಿಸಿ, ‘ಸಿಂಧೂರ’ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ನಮ್ಮ ಸಶಸ್ತ್ರಪಡೆಯ ಯೋಧರು ತೋರಿದ ಪರಾಕ್ರಮ, ಧೈರ್ಯ, ಸಾಹಸವು ಮೆಚ್ಚುವಂತಹದ್ದು’ ಎಂದು ಗೃಹ ಸಚಿವರು ಶ್ಲಾಘಿಸಿದರು.

ಆಪರೇಷನ್ ಸಿಂಧೂರವು ಭಯೋತ್ಪಾದನೆ ವಿರುದ್ಧದ ಭಾರತದ ಹೊಸ ನೀತಿ ಮತ್ತು ನ್ಯಾಯಕ್ಕಾಗಿ ದೇಶದ ಅಚಲ ಪ್ರತಿಜ್ಞೆಯಾಗಿದೆ ಎಂದು ಮೋದಿ ಹೇಳಿದ್ದರು.

ಭಾರತವು ಅಣ್ವಸ್ತ್ರದ ಬೆದರಿಕೆಗೆ ಬಲಿಯಾಗುವುದಿಲ್ಲ ಎಂದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದ ಮೋದಿ, ‘ಭಯೋತ್ಪಾದನೆ ಮತ್ತು ವ್ಯಾಪಾರ, ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ಸಾಗಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.