ರೈಲು ಟಿಕೆಟ್ ಮೇಲೆ ಪ್ರಧಾನಿ ಮೋದಿಯವರ ಭಾವಚಿತ್ರ
ನವದೆಹಲಿ: ರೈಲು ಟಿಕೆಟ್‌ಗಳಲ್ಲಿ ಆಪರೇಷನ್ ಸಿಂಧೂರ ವೀರರಿಗೆ ಪ್ರಧಾನಿ ನರೇಂದ್ರ ಮೋದಿಯವರು ನಮಸ್ಕರಿಸುವ ಚಿತ್ರವನ್ನು ಪ್ರಕಟಿಸಲಾಗಿದೆ.
ಇದು ಸೈನಿಕರ ಶೌರ್ಯಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಇದರ ಜತೆಗೆ ರೈಲ್ವೆ ಇಲಾಖೆಯ ಎಲ್ಲಾ ವಿಭಾಗ ಮತ್ತು ವಲಯಗಳ ನಿಲ್ದಾಣಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಪರೇಷನ್ ಸಿಂಧೂರ ಯಶಸ್ಸನ್ನು ಆಚರಿಸಿದೆ ಎಂದು ತಿಳಿಸಿದೆ.
ಜಮ್ಮು, ಪಠಾಣ್‌ಕೋಟ್, ನವದೆಹಲಿ ಮತ್ತು ಶ್ರೀನಗರ ಸೇರಿದಂತೆ ಇತರ ನಿಲ್ದಾಣಗಳಲ್ಲಿ ಸಶಸ್ತ್ರ ಪಡೆಗಳ ಸಮವಸ್ತ್ರದ ಬಣ್ಣಗಳಲ್ಲಿ ಚಿತ್ರಿಸಲಾಗಿದೆ.
ಕಾಂಗ್ರೆಸ್ ವಾಗ್ದಾಳಿ
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಾಬೆಲೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟಿಕೆಟ್ ಫೋಟೊವನ್ನು ಹಂಚಿಕೊಂಡಿದ್ದಾರೆ.
‘ಮೋದಿ ಸರ್ಕಾರ ಎಷ್ಟು ಜಾಹೀರಾತು ಗೀಳನ್ನು ಹೊಂದಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಅವರು ರೈಲ್ವೆ ಟಿಕೆಟ್‌ಗಳಲ್ಲಿ ‘ಆಪರೇಷನ್ ಸಿಂಧೂರ’ ಅನ್ನು ಜಾಹೀರಾತಿನಂತೆ ಬಳಸುತ್ತಿದ್ದಾರೆ. ಅವರು ಮಿಲಿಟರಿಯ ಶೌರ್ಯವನ್ನು ಸಹ ಉತ್ಪನ್ನದಂತೆ ಮಾರಾಟ ಮಾಡುತ್ತಿದ್ದಾರೆ. ಇದು ದೇಶಭಕ್ತಿ ಅಲ್ಲ - ಇದು ಚೌಕಾಶಿ’ ಎಂದು ಬಾಬೆಲೆ ಬರೆದಿದ್ದಾರೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಡ್ಯಾನಿಶ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದು, ‘ಪ್ರಧಾನಿ ನರೇಂದ್ರ ಮೋದಿ ಯುದ್ಧ ಮತ್ತು ಹುತಾತ್ಮತೆಯನ್ನು ಅವಕಾಶಗಳಾಗಿ ನೋಡುತ್ತಾರೆ. ಮುಗ್ಧ ನಾಗರಿಕರು ರಕ್ತ ಸುರಿಸಿ, ಧೈರ್ಯಶಾಲಿ ಸೈನಿಕರು ಪಾಕಿಸ್ತಾನವನ್ನು ಎದುರಿಸಲು ಎಲ್ಲವನ್ನೂ ಪಣಕ್ಕಿಟ್ಟಾಗ, ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಹುತಾತ್ಮರ ಹೆಸರುಗಳು ಅಥವಾ ಮುಖಗಳಿಲ್ಲ - ಕೇವಲ ಮೋದಿಯವರ ಚಿತ್ರವಿಟ್ಟು ಪ್ರಚಾರ ಮಾಡಲಾಗಿದೆ. ಇದು ಸ್ವಾರ್ಥದ ಪರಮಾವಧಿಯಲ್ಲವೇ?’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.