ADVERTISEMENT

ಆಪರೇಷನ್ ಸಿಂಧೂರ: ಸಂಯಮಕ್ಕೆ ಜಾಗತಿಕ ನಾಯಕರ ಕರೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:24 IST
Last Updated 7 ಮೇ 2025, 14:24 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ವಾಷಿಂಗ್ಟನ್‌/ಮಾಸ್ಕೊ/ಲಂಡನ್ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸಬೇಕು. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶೀಘ್ರ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ಇದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿ ಗುಟೆರಸ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರು ಹೇಳಿದ್ದಾರೆ.

‘ಇದು ನಾಚಿಕೆಗೇಡಿನ ಸಂಗತಿ. ಈ ಹಿಂದಿನ ಘಟನೆಗಳನ್ನು ಅವಲೋಕಿಸಿದಾಗ ಏನಾದರೂ ಸಂಭವಿಸಲಿದೆ ಎಂದು ಜನರಿಗೆ ಗೊತ್ತಿತ್ತು. ಉಭಯ ದೇಶಗಳು ದೀರ್ಘಕಾಲದಿಂದಲೂ ಹೋರಾಟ ಮಾಡುತ್ತಿವೆ. ಇದೆಲ್ಲವೂ ಶೀಘ್ರದಲ್ಲಿ ಕೊನೆಗೊಳ್ಳಲಿದೆ ಎಂಬ ಭರವಸೆ ಇದೆ’ ಎಂದು ಟ್ರಂಪ್ ಹೇಳಿದ್ದಾರೆ.

‘1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಒಪ್ಪಂದಗಳ ಅವಕಾಸಗಳಡಿ ಭಾರತ ಮತ್ತು ಪಾಕಿಸ್ತಾನ ಶಾಂತಿಯುತ, ರಾಜಕೀಯ ಮತ್ತು ರಾಜತಾಂತ್ರಿಕವಾಗಿ ದ್ವಿಪಕ್ಷೀಯ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಭರವಸೆ ಇದೆ. ಉಭಯ ದೇಶಗಳು ಸಂಯಮದಿಂದ ಇರಬೇಕು’ ಎಂದು ರಷ್ಯಾ ವಿದೇಶಾಂಗ ಇಲಾಖೆ ಹೇಳಿದೆ.

ADVERTISEMENT

‘ಭಾರತ ಮತ್ತು ಪಾಕಿಸ್ತಾನ ಸಂಯಮ ಕಾಪಾಡಬೇಕು. ಸಂಘರ್ಷದಿಂದ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಶಾಂತಿಗೆ ಅಪಾಯವಿದೆ. ಮಾತುಕತೆ ಮೂಲಕ ಉದ್ವಿಗ್ನತೆ ತಗ್ಗಿಸಿ, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಬಲಗೊಳಿಸಲು ಎರಡೂ ದೇಶಗಳು ಮುಂದಾಗಬೇಕು‘ ಎಂದು ಯುಎಇ ವಿದೇಶಾಂಗ ವ್ಯವಹಾರಗಳ ಉಪಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ಝಯೇದ್‌ ಅಲ್ ನಹ್ಯಾನ್  ಹೇಳಿದ್ದಾರೆ.

‘ಪರಸ್ಪರ ಪ್ರತೀಕಾರವು ಸೇನಾ ಸಂಘರ್ಷವಾಗಿ ಬದಲಾಗುತ್ತಿರುವುದು ಕಳವಳ ಉಂಟುಮಾಡಿದೆ. ದಕ್ಷಿಣ ಏಷ್ಯಾದ ಶಾಂತಿ ಮತ್ತು ಸುಸ್ಥಿರತೆಗಾಗಿ ಮಾತುಕತೆಯನ್ನು ನಡೆಸುವಂತೆ ಒತ್ತಾಯಿಸುತ್ತೇವೆ’ ಎಂದು ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಮಸ ಹಯಾಶಿ ತಿಳಿಸಿದ್ದಾರೆ.

‘ಪಾಕಿಸ್ತಾನದ ಮೇಲೆ ಭಾರತದ ಪಡೆಗಳು ನಡೆಸಿದ ದಾಳಿ ನಂತರ ಉಲ್ಬಣಿಸಿರುವ ಸಂಘರ್ಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಉಭಯ ದೇಶಗಳ ಜೊತೆ ಬ್ರಿಟನ್‌ ಮಾತುಕತೆ ನಡೆಸಲಿದೆ‘ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್

ವಿಷಾದನೀಯ: ಚೀನಾ ‘ಭಾರತ ಸೇನಾ ಕಾರ್ಯಾಚರಣೆಯು ವಿಷಾದನೀಯವಾದದ್ದು. ಎರಡು ದೇಶಗಳು ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವುದನ್ನು ತಡೆಯಬೇಕು. ಚೀನಾವು ಭಯೋತ್ಪಾದನೆಯನ್ನು ವಿರೋಧಿಸುತ್ತದೆ’ ಎಂದು ಚೀನಾ ಬುಧವಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.