ADVERTISEMENT

ಆಪರೇಷನ್‌ ಸ್ನೋ ಲೆಪರ್ಡ್‌' ಕಾರ್ಯಾಚರಣೆ ನಿಂತಿಲ್ಲ- ಲೆ. ಜನರಲ್‌ ವೈ.ಕೆ.ಜೋಶಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 14:55 IST
Last Updated 22 ಜನವರಿ 2022, 14:55 IST

ಜಮ್ಮು: ‘ಪೂರ್ವ ಲಡಾಕ್‌ನಲ್ಲಿ ತನ್ನ ಸೇನೆ ಹಿಂತೆಗೆದುಕೊಳ್ಳಲು ಹಾಗೂ ಯಥಾಸ್ಥಿತಿಯನ್ನು ಮರುಸ್ಥಾಪಿಸಲು ಚೀನಾ ನಿರಾಕರಿಸಿದ ನಂತರ ಭಾರತೀಯ ಸೇನೆಯು ಆರಂಭಿಸಿರುವ ‘ಆಪರೇಷನ್‌ ಸ್ನೋ ಲೆಪರ್ಡ್‌’ ಕಾರ್ಯಾಚರಣೆ ಮುಂದುವರೆದಿದ್ದು, ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಿದೆ’ ಎಂದು ಉತ್ತರ ಸೇನಾಪಡೆ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ವೈ.ಕೆ.ಜೋಶಿ ಹೇಳಿದರು.

ಉಧಂಪುರದಲ್ಲಿ ಶನಿವಾರ ನಡೆದ ‘ಆಪರೇಷನ್‌ ಸ್ನೋ ಲೇಪರ್ಡ್‌’ ಕಾರ್ಯಾಚರಣೆ ವೇಳೆ ಗಮನಾರ್ಹ ಹಾಗೂ ಅತ್ಯುತ್ತಮ ಪ್ರದರ್ಶನ ತೋರಿದ ವಿವಿಧ ಸೇನಾ ಘಟಕಗಳಿಗೆ ಪ್ರಶಂಸನಾ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.

‘ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನ ಲಡಾಕ್‌ ಪ್ರಾಮುಖ್ಯತೆ ನಮಗೆ ಗೊತ್ತಿದೆ. ಈ ಪ್ರದೇಶದ ಭದ್ರತೆಗಾಗಿ ಸೇನೆಯು ಬದ್ಧತೆ ಮೂಲಕ ಎಲ್‌ಒಸಿ, ಎಲ್‌ಎಸಿ, ಎಜಿಪಿಎಲ್‌, ಐಬಿ ಪ್ರದೇಶದಲ್ಲಿ ಪರಿಪೂರ್ಣ ಹಿಡಿತವನ್ನು ಸಾಧಿಸಿದೆ’ ಎಂದು ತಿಳಿಸಿದರು.

ADVERTISEMENT

‘ಲಡಾಕ್‌ನಲ್ಲಿ ಎದುರಾಳಿ ದೇಶದ ಆಕ್ರಮಣಿಕಾರಿ ಯೋಜನೆಗಳನ್ನು ಸಮರ್ಥವಾಗಿ ತಡೆ ಹಿಡಿದಿದ್ದೇವೆ. ಶಾಂತಿಯುತ ಮಾತುಕತೆಯ ನಂತರ ಚೀನಾವು ಕೆಲ ಪ್ರದೇಶಗಳಲ್ಲಿ ತನ್ನ ಸೇನೆಯನ್ನು ಹಿಂತೆಗೆದುಕೊಂಡಿದೆ. ಇನ್ನೂ ಕೆಲ ಪ್ರದೇಶಗಳಲ್ಲಿನ ವಿವಾದದ ಕುರಿತು ಮಾತುಕತೆ ಮುಂದುವರೆದಿದೆ. ಹಾಗಾಗಿ ಹಿಮಚ್ಛಾದಿತ ಪರ್ವತಗಳಲ್ಲಿ ಭಾರತೀಯ ಸೇನೆಯು ಎಚ್ಚರಿಕೆಯನ್ನು ವಹಿಸಿದೆ’ ಎಂದು ಹೇಳಿದರು.

‘ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ, ಗುಂಡಿನ ದಾಳಿಯಂತಹ ಕೃತ್ಯಗಳನ್ನು ಕಾಶ್ಮೀರದ ಜನತೆ ತಿರಸ್ಕರಿಸಿದ್ದಾರೆ. ಭದ್ರತಾ ಪಡೆಗಳ ಹಾಗೂ ಕಾಶ್ಮೀರದ ಜನರ ನಿರಂತರ ಪರಿಶ್ರಮದಿಂದ ಕಲ್ಲುತೂರಾಟ, ಪ್ರತಿಭಟನೆಯಂತಹ ಬೆಳವಣಿಗೆಗಳು ಕಡಿಮೆಯಾಗಿದೆ. ಇದೆಲ್ಲದರ ಪರಿಣಾಮ ಉಗ್ರರ ಸಂಖ್ಯೆಯೂ 200ಕ್ಕಿಂತ ಕಡಿಮೆಯಾಗಿದೆ. ಇದು ಭದ್ರತಾ ಪಡೆಗಳ ಬಹುದೊಡ್ಡ ಸಾಧನೆ. ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್‌, ಸಿಆರ್‌ಪಿಎಫ್‌ ಯೋಧರ ಕಾರ್ಯ ಅಭಿನಂದನೀಯ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.