ADVERTISEMENT

ಜಿಎಸ್‌ಟಿ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಧರಣಿ: ನಡೆಯದ ಸಂಸತ್ ಕಲಾಪ

ಚರ್ಚೆಯಿಂದ ಪಲಾಯನ ಆರೋಪ ಅಲ್ಲಗಳೆದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 18:28 IST
Last Updated 20 ಜುಲೈ 2022, 18:28 IST
ಬುಧವಾರ ನಡೆದ ರಾಜ್ಯಸಭಾ ಕಲಾಪದಲ್ಲಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ
ಬುಧವಾರ ನಡೆದ ರಾಜ್ಯಸಭಾ ಕಲಾಪದಲ್ಲಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ   

ನವದೆಹಲಿ: ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಧರಣಿ ಮುಂದುವರಿಸಿದ್ದರಿಂದ,ಸಂಸತ್ತಿನ ಉಭಯ ಸದನಗಳ ಕಲಾಪ ಮೂರನೇ ದಿನವಾದ ಬುಧವಾರವೂ ನಡೆಯಲಿಲ್ಲ.

ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಪ್ರಲ್ಹಾದ ಜೋಷಿ ಹಾಗೂ ಸ್ಮೃತಿ ಇರಾನಿ ಅವರು ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ವಾಗ್ದಾಳಿ ನಡೆಸಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್‌ನಿಂದ ಗುಣಮುಖರಾದ ಬಳಿಕ ಬೆಲೆ ಏರಿಕೆ ಕುರಿತ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಗೋಯಲ್ ಹಾಗೂ ಜೋಷಿ ಸ್ಪಷ್ಟನೆ ನೀಡಿದರು.

ADVERTISEMENT

ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಚಿವರು ತೆರಿಗೆ ಹಾಕಲು ಒಪ್ಪಿಗೆ ನೀಡಿದ್ದರು ಎಂದು ಗೋಯಲ್ ಹೇಳಿದರು.

ಸಚಿವೆ ಸ್ಮೃತಿ ಇರಾನಿ ಅವರ ಕೋಪ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕಡೆಗೆ ತಿರುಗಿತು. ‘ರಾಹುಲ್ ಗಾಂಧಿ ಅವರು ರಾಜಕೀಯವಾಗಿ ಅಪ್ರಯೋಜಕ ಆಗಿರಬಹುದು. ಆದರೆ ಅವರು ಸಂಸದೀಯ ಕಲಾಪಗಳ ಉತ್ಪಾದಕತೆಗೆ ಅಡ್ಡಿಯಾಗಬಾರದು’ ಎಂದು ಟೀಕಿಸಿದರು. ರಾಹುಲ್ ತಮ್ಮ ಹಟಮಾರಿ ಧೋರಣೆ ಯಿಂದ ಕಲಾಪಗಳನ್ನು ತಡೆಯುತ್ತಿದ್ದು, ಯಾವ ಚರ್ಚೆಯೂ ನಡೆಯದೆ ಕಲಾಪ ವ್ಯರ್ಥವಾಗುತ್ತಿದೆ ಎಂದು ಅವರು ಆರೋಪಿಸಿದರು.

ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿರುವ ಕುರಿತು ಚರ್ಚೆ ನಡೆಸಲು ಪ್ರತಿಪಕ್ಷಗಳು ಇಟ್ಟಿರುವ ಬೇಡಿಕೆಗೆ ಅವಕಾಶ ನೀಡದಿರುವ ಸರ್ಕಾರದ ಹಟಮಾರಿ ಧೋರಣೆಯಿಂದ ಕಲಾಪಗಳು ನಡೆಯುತ್ತಿಲ್ಲ ಎಂದು ಆರೋಪಿಸಿದಕಾಂಗ್ರೆಸ್, ಸರ್ಕಾರವನ್ನು ‘ಅಸಂಸದೀಯ’ ಎಂದು ಕರೆಯಿತು.

ಚರ್ಚೆಯಿಂದ ಸರ್ಕಾರ ಪಲಾಯನ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸಚಿವ ಗೋಯಲ್ ಅಲ್ಲಗಳೆದರು.‘ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್‌ ವಿನಾಶಕಾರಿ ವರ್ತನೆ ತೋರುತ್ತಿದೆ. ಕಲಾಪ ತಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂಬುದಾಗಿ ಪಕ್ಷದ ಮುಖಂಡ ಜೈರಾಮ್ ರಮೇಶ್ ಅವರು ಮಾಡಿರುವ ಟ್ವೀಟ್‌ನಿಂದ ಇದು ಸಾಬೀತಾಗಿದೆ’ ಎಂದು ಹೇಳಿದರು.

ರಾಹುಲ್‌ಗೆ ಸ್ಮೃತಿ ತರಾಟೆ

‘ಸಂಸದೀಯ ಪ್ರಕ್ರಿಯೆ ಹಾ

ಗೂ ಸಂಪ್ರದಾಯಗಳಿಗೆ ನಿರಂತರವಾಗಿ ಅಗೌರವ ತೋರುವ ವರ್ತನೆಯು ರಾಹುಲ್ ಗಾಂಧಿ ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಗಿದೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದರು.

‘2004ರಿಂದ 2019ರವರೆಗೆ ಅಮೇಠಿ ಕ್ಷೇತ್ರದ ಸಂಸದರಾಗಿದ್ದ ರಾಹುಲ್, ಕ್ಷೇತ್ರದ ಜನರ ಪರವಾಗಿ ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳಿಲ್ಲ. ಯಾವುದೇ ಖಾಸಗಿ ಮಸೂದೆಯನ್ನೂ ಮಂಡಿಸಿಲ್ಲ. ವಯನಾಡ್‌ ಸಂಸದರಾದ ಬಳಿಕ, 2019ರ ಚಳಿಗಾಲದ ಅಧಿವೇಶನದಲ್ಲಿ ಶೇ 40ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದರು’ ಎಂದು ಸ್ಮೃತಿ ದೂರಿದರು.ಪದೇ ಪದೇ ವಿದೇಶ ಪ್ರವಾಸಕ್ಕೆ ತೆರಳುವ ರಾಹುಲ್ ನಡೆಯಿಂದ ಅವರ ಪಕ್ಷಕ್ಕೆ ಚಿಂತೆಯಾಗಿದೆ ಎಂದೂ ಹೇಳಿದರು.

2019ರಲ್ಲಿ ಅಮೇಠಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಮೃತಿ ಇರಾನಿ ಹಾಗೂ ರಾಹುಲ್ ಗಾಂಧಿ ಅವರು ಪರಸ್ಪರ ಎದುರಾಳಿಯಾಗಿದ್ದರು. ರಾಹುಲ್ ಅವರನ್ನು ಸ್ಮೃತಿ ಸೋಲಿಸಿದ್ದರು.

***

ಚರ್ಚೆಯಿಂದ ಸರ್ಕಾರ ಪಲಾಯನ ಮಾಡುತ್ತಿದೆ. ಎಲ್ಲ ವಿಷಯಗಳನ್ನು ಬದಿಗೊತ್ತಿ ನಿಯಮ 267ರ ಅಡಿ ಚರ್ಚೆ ನಡೆಸಲು ಸರ್ಕಾರ ಅವಕಾಶ ನೀಡುತ್ತಿಲ್ಲ

-ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ

***

ರಚನಾತ್ಮಕ ಚರ್ಚೆಯಲ್ಲಿ ಆಸಕ್ತಿಯಿಲ್ಲದಕಾಂಗ್ರೆಸ್‌, ಸಂಸದೀಯ ಕಾರ್ಯಕಲಾಪಗಳನ್ನುನಾಶ ಮಾಡುತ್ತಿದೆ. ಚರ್ಚೆಯ ನಿಯಮಾವಳಿಗಳನ್ನು ಪ್ರತಿಪಕ್ಷಗಳು ಅನುಸರಿಸಬೇಕು

-ಪ್ರಲ್ಹಾದ ಜೋಷಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.