ADVERTISEMENT

ಅದಾನಿ ಪರ ಮಾತಾಡಿದ ಪವಾರ್‌ ಹೇಳಿಕೆಯನ್ನು ಪ್ರತಿಪಕ್ಷಗಳು ಕೇಳಿಸಿಕೊಳ್ಳಲಿ: ಶಿಂದೆ

ಪಿಟಿಐ
Published 8 ಏಪ್ರಿಲ್ 2023, 5:47 IST
Last Updated 8 ಏಪ್ರಿಲ್ 2023, 5:47 IST
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ   

ಮುಂಬೈ : ಎನ್‌ಸಿಪಿ ನಾಯಕ ಶರದ್ ಪವಾರ್ ’ಅದಾನಿ’ ಪರ ಹೇಳಿಕೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪ್ರತಿಪಕ್ಷಗಳ ಮೇಲೆ ಪರೋಕ್ಷವಾಗಿ ಮಾತಿನ ದಾಳಿ ನಡೆಸಿದ್ದಾರೆ. ’ಪ್ರತಿಪಕ್ಷಗಳು ಪವಾರ್‌ ಹೇಳಿಕೆಯನ್ನು ಸರಿಯಾಗಿ ಕೇಳಿಸಿಕೊಳ್ಳಬೇಕಿದೆ’ ಎಂದು ಕಾಂಗ್ರೆಸ್‌ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆಗೆ ಟಾಂಗ್‌ ನೀಡಿದ್ದಾರೆ.

ಇಂಗ್ಲೆಂಡ್‌ ಮೂಲದ ಹಿಂಡೆನ್‌ಬರ್ಗ್‌ ರಿಸರ್ಚ್‌ ಎಂಬ ಸಂಸ್ಥೆಯು ಗೌತಮ್‌ ಅದಾನಿ ಒಡೆತನದ ’ಅದಾನಿ ಸಮೂಹ ಸಂಸ್ಥೆ’ ಮೇಲೆ ಗುರುತರ ಆರೋಪ ಮಾಡಿತ್ತು.’ಅದಾನಿ ಸಮೂಹವು ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರಿದೆ ಮತ್ತು ಲೆಕ್ಕ ಪತ್ರಗಳ ಅಕ್ರಮದಲ್ಲಿ ತೊಡಗಿದೆ’ ಎಂದು ಆರೋಪ ಹೊರಿಸಿತ್ತು. ಈ ವರದಿ ಹೊರಬಂದ ಮೇಲೆ ಅದಾನಿ ಕಂಪನಿಯ ಮೇಲೆ ಅಪಾರ ಪರಿಣಾಮ ಬೀರಿತ್ತು. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿಯೂ ಅದಾನಿ ಸ್ಥಾನ ಕುಸಿದಿತ್ತು. ವಿರೋಧ ಪಕ್ಷಗಳು ಅದಾನಿ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದವು.

ಶುಕ್ರವಾರ ಅದಾನಿ ಒಡೆತನದ ಖಾಸಗಿ ವಾಹಿನಿಯೊಂದಕ್ಕೆ ಶರದ್‌ ಪವಾರ್‌ ಸಂದರ್ಶನ ನೀಡಿದ್ದರು. ಈ ವೇಳೆ ಹಿಂಡೆನ್‌ಬರ್ಗ್‌ ವರದಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಶರದ್‌ ಪವಾರ್‌,‘ಇಂತಹ ಆಪಾದನೆಯನ್ನು ಹಿಂದೆಯೂ ಮಾಡಲಾಗಿತ್ತು. ಈ ಭಾರಿಯ ಆರೋಪ ಸಂಸತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಈ ಹೇಳಿಕೆ ನೀಡಿದವರು ಯಾರು? ಅವರ ಹಿನ್ನೆಲೆಯೇನು? ನಾವು ಎಂದಿಗೂ ಈ ವ್ಯಕ್ತಿಗಳ ಬಗ್ಗೆ ಕೇಳಿಯೇ ಇಲ್ಲ. ಈ ವರದಿ ಹೊರಬಂದ ಮೇಲೆ ದೇಶದಾದ್ಯಂತ ಕೋಲಾಹಲ ಎದ್ದಿದ್ದು, ಇದು ದೇಶದ ಆರ್ಥಿಕತೆಯ ಮೇಲೆ ಬಹಳ ಪರಿಣಾಮ ಬೀರಿದೆ. ಮೇಲ್ನೋಟಕ್ಕೆ ಒಬ್ಬ ವ್ಯಕ್ತಿಯನ್ನು ಗುರಿ ಮಾಡಿಕೊಂಡು ಸೃಷ್ಟಿಸಿದ ವರದಿಯಂತೆ ಕಾಣಿಸುತ್ತಿದೆ‘ ಎಂದು ಹೇಳಿದ್ದರು.

ADVERTISEMENT

ಈ ಹೇಳಿಕೆ ಹಲವು ಆಯಾಮಗಳನ್ನು ತೆಗೆದುಕೊಂಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಇದೇ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ’ಅದಾನಿ ವಿಷಯದಲ್ಲಿ ಪವಾರ್‌ ಹೇಳಿಕೆಯನ್ನು ಸರಿಯಾಗಿ ಕೇಳಿಸಿಕೊಳ್ಳಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.