ADVERTISEMENT

ವಿರೋಧ ಪಕ್ಷಗಳ ಪ್ರತಿಭಟನೆ: 30ಕ್ಕೂ ಹೆಚ್ಚು ಸಂಸದರು ಪೊಲೀಸ್‌ ವಶಕ್ಕೆ

ಅದಾನಿ ಸಮೂಹದ ವಿರುದ್ಧದ ಪ್ರಕರಣ ಜೆಪಿಸಿ ತನಿಖೆಗೆ ಒಪ್ಪಿಸುವಂತೆ ಆಗ್ರಹ

ಪಿಟಿಐ
Published 24 ಮಾರ್ಚ್ 2023, 13:33 IST
Last Updated 24 ಮಾರ್ಚ್ 2023, 13:33 IST
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು–ಪಿಟಿಐ ಚಿತ್ರ 
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು–ಪಿಟಿಐ ಚಿತ್ರ    

ನವದೆಹಲಿ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪಿಸಿ ವಿರೋಧ ಪಕ್ಷಗಳ ನಾಯಕರು ಸಂಸತ್‌ ಭವನದಿಂದ ವಿಜಯ್‌ ಚೌಕದವರೆಗೆ ಶುಕ್ರವಾರ ಪ್ರತಿಭಟನ ರ‍್ಯಾಲಿ ನಡೆಸಿದ್ದು, ಈ ವೇಳೆ ನಿಯಮ ಉಲ್ಲಂಘಿಸಿದ್ದಾರೆಂದು ದೂರಿ 30ಕ್ಕೂ ಅಧಿಕ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಪ್ರತಿಭಟನ ರ‍್ಯಾಲಿಯಲ್ಲಿ ಸಿಪಿಐ, ಸಿಪಿಎಂ, ಶಿವಸೇನಾ (ಉದ್ಧವ್‌ ಠಾಕ್ರೆ ಬಣ), ಜೆಡಿಯು, ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಇತರ ಪಕ್ಷಗಳ ಸಂಸದರು ಪಾಲ್ಗೊಂಡಿದ್ದರು. ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿದ ಪ್ರತಿಭಟನಕಾರರು, ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿದೆ. ಅವರ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಸತ್‌ ಭವನದ ಎದುರು ಸೇರಿದ್ದ ‍ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಅದಾನಿ ಸಮೂಹದ ವಿರುದ್ಧದ ಪ್ರಕರಣದ ತನಿಖೆಯನ್ನು ಜೆಪಿಸಿ ತನಿಖೆಗೆ ಒಪ‍್ಪಿಸಿ’, ‘ಎಲ್‌ಐಸಿಯನ್ನು ಉಳಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ‘‍ಪ್ರಜಾಪ್ರಭುತ್ವವು ಅಪಾಯದಲ್ಲಿದೆ’ ಎಂಬ ಬರಹವುಳ್ಳ ಬ್ಯಾನರ್‌ವೊಂದನ್ನು ಹಿಡಿದು ಪ್ರತಿಭಟನ ಮೆರವಣಿಗೆ ನಡೆಸಿದರು.

‘ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಕೆ.ಸಿ.ವೇಣುಗೋಪಾಲ್‌, ಅಧೀರ್‌ ರಂಜನ್‌ ಚೌಧರಿ, ಡಿ.ಕೆ.ಸುರೇಶ್‌, ಮಾಣಿಕಮ್‌ ಠಾಗೋರ್‌, ಇಮ್ರಾನ್‌ ಪ್ರತಾಪ್‌ಗಾಢಿ ಹಾಗೂ ಮೊಹಮ್ಮದ್‌ ಜಾವೇದ್‌ ಸೇರಿದಂತೆ ಹಲವು ಸಂಸದರನ್ನು ವಿಜಯ್‌ ಚೌಕದ ಬಳಿ ವಶಕ್ಕೆ ಪಡೆದಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದ್ದಾರೆ.

‘ಕಲಂ 144ನ್ನು ಉಲ್ಲಂಘಿಸಿದ್ದಕ್ಕಾಗಿ ವಿರೋಧ ಪಕ್ಷಗಳ 30ಕ್ಕೂ ಹೆಚ್ಚು ಸಂಸದರನ್ನು ವಶಕ್ಕೆ ಪಡೆದು, ಹತ್ತಿರದ ಪೊಲೀಸ್‌ ಠಾಣೆಗಳಿಗೆ ಕರೆದೊಯ್ಯಲಾಯಿತು’ ಎಂದು ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಬೇಕೆಂದು ನಾವು ಒತ್ತಾಯಿಸುತ್ತಲೇ ಇದ್ದೇವೆ. ಸದನದಲ್ಲಿ ಬಿಜೆಪಿಗೆ ಬಹುಮತವಿದೆ. ಹೀಗಿದ್ದರೂ ಅವರಿಗೆ ಭಯ ಕಾಡುತ್ತಿದೆ. ಜೆಪಿಸಿ ತನಿಖೆಯ ಪಟ್ಟನ್ನು ನಾವು ಸಡಿಲಿಸುವುದಿಲ್ಲ. ವಿರೋಧ ಪಕ್ಷದವರೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತೇವೆ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಒಬಿಸಿ ಸಮುದಾಯದವರನ್ನು ಕಳ್ಳರಿಗೆ ಹೋಲಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೂರಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ‘ಬಿಜೆಪಿಯು ಜಾತಿ ರಾಜಕಾರಣಕ್ಕೆ ಮುಂದಾಗಿದೆ’ ಎಂದು ಕಿಡಿಕಾರಿದ್ದಾರೆ.

‘ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಹಣಿಯಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿರುವುದು ಇದಕ್ಕೊಂದು ನಿದರ್ಶನ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್‌ ಆರೋಪಿಸಿದ್ದಾರೆ.

‘ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಸಂಸತ್‌ ಭವನ ಹಾಗೂ ವಿಜಯ್‌ ಚೌಕದ ಸುತ್ತಲೂ ಮುಂಜಾಗ್ರತಾ ದೃಷ್ಟಿಯಿಂದ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.